ಬಂಟ್ವಾಳ: ಅಬ್ದುಲ್ ರಹಿಮಾನ್ ಕೊಲೆ ಹಾಗೂ ಕಲಂದರ್ ಶಾಫಿ ಅವರ ಮೇಲೆ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇ 27ರಂದು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೀಗ ಶುಕ್ರವಾರ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಒಟ್ಟು ಈ ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆದಂತಾಗಿದೆ. ಬಂಟ್ವಾಳದ ತೆಂಕಬೆಳ್ಳುರು ಗ್ರಾಮದ ಸುಮಿತ್ ಆಚಾರ್ಯ (27) ಹಾಗೂ ಬಂಟ್ವಾಳದ ಬಡಗಬೆಳ್ಳೂರು ಗ್ರಾಮದ ರವಿರಾಜ್ (23) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇನ್ನು ಈಗಾಗಲೇ ಪೊಲೀಸರು ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ಮನೆಯ ದೀಪಕ್ ಪೂಜಾರಿ(21), ಅಮ್ಮುಂಜೆ ಗ್ರಾಮದ ಶಿವಾಜಿ ನಗರ ಪೃಥ್ವಿರಾಜ್ ಜೋಗಿ(21) ಹಾಗೂ ಅಮ್ಮುಂಜೆ ಗ್ರಾಮದ ಚಿಂತನ್ ಬೆಳ್ಳಡ(19) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.