ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೇರಳ ಉದ್ಯೋಗಾವಕಾಶ: ಬಿಮಲ್ ಬಿಲ್ಡ್‌ಕಾನ್ ಸಹ ನಿರ್ದೇಶಕ ಪ್ರಶಾಂತ್

0
1

ಮೂಡುಬಿದಿರೆ,: ಎಸ್. ಎನ್. ಎಂ. ಪಾಲಿಟೆಕ್ನಿಕ್, ಮೂಡುಬಿದಿರೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಬಿಮಲ್ ಬಿಲ್ಡ್‌ಕಾನ್ ಸಂಸ್ಥೆಯ ಸಹ ನಿರ್ದೇಶಕ ಪ್ರಶಾಂತ್ ಅವರು ಮಾತನಾಡಿ, ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಸ್ತುತ ಹೇರಳ ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪ್ರಾಯೋಗಿಕ ಜ್ಞಾನ, ತಾಂತ್ರಿಕ ಕೌಶಲ್ಯ, ಸಂವಹನ ಸಾಮರ್ಥ್ಯ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಿದರೆ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಗೋಪಾಲಕೃಷ್ಣ ಕೆ. ಎಸ್. ಹಾಗೂ ಉಪನ್ಯಾಸಕರು ವಿಭಾಗದ ಪರಿಚಯ, ಪಠ್ಯ ವಿಷಯಗಳು, ಪ್ರಯೋಗಾಲಯಗಳ ಸೌಲಭ್ಯಗಳು, ವಿಭಾಗದ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳು ಮತ್ತು ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.

ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಕ್ಯಾರಲ್ ವಿವಿನ ಮಾಡ್ತ ಹಾಗೂ ಜಿತೇಶ್ ಅವರು ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳು ಮತ್ತು ವೃತ್ತಿಜೀವನದ ಪಯಣವನ್ನು ಹಂಚಿಕೊಂಡು, ಹೊಸ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಲಹೆಗಳನ್ನು ನೀಡಿದರು.

ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಯೊಬ್ಬ ವಿದ್ಯಾರ್ಥಿಗೆ ಗಿಡವನ್ನು ನೀಡಿ ಸ್ವಾಗತಿಸಲಾಯಿತು. ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು, ದ್ವಿತೀಯ ಹಾಗು ತೃತೀಯ ವರ್ಷದ ಸ್ವಯಂಸೇವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here