ಆಸ್ಪತ್ರೆ ಬಿಲ್ ಪಾವತಿ ಬಳಿಕ ಖಾತೆಗೆ ಕನ್ನ ; ವ್ಯಕ್ತಿಗೆ ಲಕ್ಷಾಂತರ ರೂ. ನಷ್ಟ..!

0
137

ಉಡುಪಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಉಡುಪಿಯಲ್ಲಿ ಡೆಬಿಟ್ ಕಾರ್ಡ್ ಬಳಕೆ ಮಾಡಿದ ವ್ಯಕ್ತಿಯೊಬ್ಬರು ₹2.12 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಜೂನ್ 3ರಂದು ದೂರುದಾರರು ತಮ್ಮ ಡೆಬಿಟ್ ಕಾರ್ಡ್ ಬಳಸಿ ಆಸ್ಪತ್ರೆಯ ಬಿಲ್ ಪಾವತಿಸಿದ್ದರು. ಬಳಿಕ ಅವರು ಯಾವುದೇ ಹಣಕಾಸು ವ್ಯವಹಾರ ನಡೆಸಿರಲಿಲ್ಲ. ಆದಾಗ್ಯೂ, ಜೂನ್ 8ರಂದು ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿರುವ ಕುರಿತು ಎಸ್‌ಎಂಎಸ್ ಸಂದೇಶ ಬಂದಿದ್ದು, ಇದರಿಂದ ಅನುಮಾನಗೊಂಡ ಅವರು ಬ್ಯಾಂಕ್‌ಗೆ ಭೇಟಿ ನೀಡಿ ಖಾತೆಯ ವ್ಯವಹಾರಗಳ ವಿವರ ಪರಿಶೀಲಿಸಿದ್ದಾರೆ.

ಪರಿಶೀಲನೆ ವೇಳೆ ಜೂನ್ 5ರಿಂದ ಜೂನ್ 8ರ ಅವಧಿಯಲ್ಲಿ ಅವರ ಅರಿವಿಲ್ಲದೆ ಅಪರಿಚಿತ ಖಾತೆಗೆ ಒಟ್ಟು ₹2.12 ಲಕ್ಷ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಮೂಲಕ ಸೈಬರ್ ಖದೀಮರು ಡೆಬಿಟ್ ಕಾರ್ಡ್ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಸಂಬಂಧ ಸಂತ್ರಸ್ತ ವ್ಯಕ್ತಿ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸೈಬರ್ ವಂಚನೆಗಳು ದಿನೇದಿನೇ ಹೊಸ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆದಾರರು ತಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here