ಕಾರು ಡಿಕ್ಕಿಗೆ ಆಕ್ಟಿವಾ ಜಖಂ – ಸವಾರನ ಬಲಗೈ ಮೂಳೆ ಮುರಿತ

0
33

ವಿಟ್ಲ : ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ಕೊಳ್ನಾಡು ಗ್ರಾಮದ ಕುಳಾಲು ಬೊಳ್ಪಾದೆ ತಿರುವಿನಲ್ಲಿ ನಡೆದಿದೆ.

ಗಾಯಗೊಂಡವರನ್ನು ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ರಾಮಣ್ಣ ಮೂಲ್ಯ (45) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ರಾಮಣ್ಣ ಮೂಲ್ಯ ಅವರು ಕುಡ್ತಮುಗೇರು ಕಡೆಯಿಂದ ಕುಳಾಲು ಕಡೆಗೆ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬೊಳ್ಪಾದೆ ತಿರುವಿನಲ್ಲಿ ಕಾರು ಹಾಗೂ ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸಂಪೂರ್ಣ ಜಖಂಗೊಂಡಿದ್ದು, ರಾಮಣ್ಣ ಮೂಲ್ಯ ಅವರ ಬಲಗೈ ಮೂಳೆ ಮುರಿದಿದೆ. ಅಪಘಾತದ ಬಳಿಕ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ.

ಘಟನೆ ನಡೆದ ತಕ್ಷಣ ಸ್ಥಳೀಯರು ಗಾಯಾಳುವನ್ನು ವಿಟ್ಲದ ಬೆನಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಿಟ್ಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.