ಅಡ್ಯಾರ್ ಗಾರ್ಡನ್ ಮಾಲಕ ಕಿಶನ್ ಜೇ. ಶೆಟ್ಟಿಯಿಂದ ₹10 ಲಕ್ಷ ವೆಚ್ಚದ ನೂತನ ಮನೆ ಹಸ್ತಾಂತರ

0
6

ಮಳೆಯ ದುರಂತದಲ್ಲಿ ಮನೆ ಕಳೆದುಕೊಂಡ ಬಡ ಕುಟುಂಬಕ್ಕೆ ಮಾನವೀಯ ನೆರವು

ಮಂಗಳೂರು : ಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಅಡ್ಯಾರ್ ಗಾರ್ಡನ್ ಮಾಲಕ ಹಾಗೂ ಉದ್ಯಮಿ ಕಿಶನ್ ಜೇ. ಶೆಟ್ಟಿ ಅವರು ಅರ್ಕುಳ ಗ್ರಾಮದ ತುಪ್ಪೆಕಲ್ಲು ನಿವಾಸಿ ಜಯಂತಿ ಪರಮ ಶಿವ ಅವರ ಬಡ ಕುಟುಂಬಕ್ಕೆ ಸುಮಾರು ₹10 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿ ಹಸ್ತಾಂತರಿಸುವ ಮೂಲಕ ಮಾನವೀಯತೆಯ ಅಪೂರ್ವ ಮಾದರಿಯನ್ನು ಮೆರೆದಿದ್ದಾರೆ.

ಕಳೆದ ವರ್ಷದ ಭಾರೀ ಮಳೆಯಿಂದ ಜಯಂತಿ ಪರಮ ಶಿವ ಅವರ ತಗಡು ಶೀಟಿನ ಮನೆ ಸಂಪೂರ್ಣವಾಗಿ ಕುಸಿದು ಬಿದ್ದ ಪರಿಣಾಮ, ಅವರು ತಮ್ಮ ಸಹೋದರ ಹಾಗೂ ಅನಾರೋಗ್ಯ ಪೀಡಿತ ಸಹೋದರಿಯೊಂದಿಗೆ ಸಂಕಷ್ಟದ ಜೀವನ ನಡೆಸುತ್ತಿದ್ದರು. ಈ ದುಸ್ಥಿತಿಯನ್ನು ಅಡ್ಯಾರ್ ಗ್ರಾಮ ಪಂಚಾಯತ್ ಸಿಬ್ಬಂದಿ ಧನಂಜಯ ತುಪ್ಪೆಕಲ್ಲು, ಸಮಾಜಸೇವಕ ಮನೋಜ್ ತುಪ್ಪೆಕಲ್ಲು, ಅಡ್ಯಾರ್ ಗಾರ್ಡನ್ ವ್ಯವಸ್ಥಾಪಕರಾದ ದಿವಾಕರ್ ಶೆಟ್ಟಿ ನಡಿಗುತ್ತು ಹಾಗೂ ಸಂಜ್ಯೋತಿ ಶೇಖಾ ಅವರು ಕಿಶನ್ ಜೇ. ಶೆಟ್ಟಿಯವರ ಗಮನಕ್ಕೆ ತಂದರು.

ವಿಷಯದ ಗಂಭೀರತೆಯನ್ನು ಅರಿತ ಕಿಶನ್ ಜೇ. ಶೆಟ್ಟಿಯವರು ಯಾವುದೇ ಪ್ರಚಾರದ ಹಂಬಲವಿಲ್ಲದೆ ಸುಮಾರು ₹10 ಲಕ್ಷಗಳ ಸಂಪೂರ್ಣ ಆರ್ಥಿಕ ನೆರವು ನೀಡಿ ನೂತನ ಮನೆ ನಿರ್ಮಾಣಕ್ಕೆ ಮುಂದಾದರು. ಅಲ್ಪಾವಧಿಯಲ್ಲೇ ಮನೆ ನಿರ್ಮಾಣ ಪೂರ್ಣಗೊಂಡಿದ್ದು, ಗೃಹಪ್ರವೇಶ ಹಾಗೂ ಮನೆ ಹಸ್ತಾಂತರ ಸಮಾರಂಭ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಕಾರ್ಯಕ್ರಮದ ಪೂಜಾ ವಿಧಿವಿಧಾನಗಳನ್ನು ಪೊಳಲಿ ಗಿರಿ ಪ್ರಕಾಶ್ ತಂತ್ರಿ ನೆರವೇರಿಸಿದರು. ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿಗಳಾದ ವಜ್ರನಾಭ ಶೆಟ್ಟಿ (ಅರ್ಕುಳ ಬೀಡು) ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೈಯಕ್ತಿಕ ಕಾರಣಗಳಿಂದ ಕಿಶನ್ ಜೇ. ಶೆಟ್ಟಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಅವರ ಪರವಾಗಿ ಅವರ ಭಾವ ಹಾಗೂ ಮಹೇಶ್ ಟ್ರಾವೆಲ್ಸ್‌ನ ಮಾಲಕರಾದ ಸಂಜ್ಯೋತಿ ಶೇಖಾ ಅವರು ಜಯಂತಿ ಪರಮ ಶಿವ ಅವರಿಗೆ ನೂತನ ಮನೆಯ ಕೀಲಿಯನ್ನು ಹಸ್ತಾಂತರಿಸಿದರು.

ಈ ಮನೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಅಡ್ಯಾರ್ ಗಾರ್ಡನ್ ವ್ಯವಸ್ಥಾಪಕರಾದ ದಿವಾಕರ್ ಶೆಟ್ಟಿ ನಡಿಗುತ್ತು, ಮನೀಶ್ ರೈ (ಅಡ್ಯಾರ್), ಮಾಧವ ನಾಯ್ಕ್ (ಅಡ್ಯಾರ್) ಹಾಗೂ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮನೋಜ್ ತುಪ್ಪೆಕಲ್ಲು ಅತಿಥಿಗಳನ್ನು ಸ್ವಾಗತಿಸಿದರು. ರಾಧ್ಯ ಹರೀಶ್ ಅವರ ಪ್ರಾರ್ಥನೆಯೊಂದಿಗೆ ಸಮಾರಂಭಕ್ಕೆ ಚಾಲನೆ ದೊರೆಯಿತು. ಕಿಶನ್ ಜೇ. ಶೆಟ್ಟಿಯವರ ಪರವಾಗಿ ಸಂಜ್ಯೋತಿ ಶೇಖಾ ಅವರನ್ನು ಸನ್ಮಾನಿಸಲಾಗಿದ್ದು, ಸನ್ಮಾನ ಪತ್ರವನ್ನು ನಯನ ರಜತ್ ವಾಚಿಸಿದರು.

ಕಳೆದ ವರ್ಷದ ಭಾರೀ ಮಳೆಯಿಂದ ಮನೆ ಕುಸಿದ ಘಟನೆಯನ್ನು ಸಂಬಂಧಪಟ್ಟವರ ಗಮನಕ್ಕೆ ತಂದು, ಕಿಶನ್ ಜೇ. ಶೆಟ್ಟಿಯವರ ಮೂಲಕ ಮನೆ ನಿರ್ಮಾಣವಾಗಲು ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಿದ ಅಡ್ಯಾರ್ ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀ ಧನಂಜಯ ತುಪ್ಪೆಕಲ್ಲು ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಹನುಮಾನ್ ಸೇವಾ ಸಂಘ, ದ್ವಾರ ಸೇವಾ ಸಮಿತಿ ಹಾಗೂ ಸನ್ನಿಧಿ ವದಂಗಳ ಸೇರಿದಂತೆ ವಿವಿಧ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಸಂಪೂರ್ಣ ಕಾರ್ಯಕ್ರಮವನ್ನು ದೀಪಕ್ ಅಡ್ಯಾರ್ ಅಚ್ಚುಕಟ್ಟಾಗಿ ನಿರೂಪಿಸಿದರು.

ಸಮಾಜಸೇವೆಗೆ ಹೊಸ ಅರ್ಥ ನೀಡಿರುವ ಕಿಶನ್ ಜೇ. ಶೆಟ್ಟಿಯವರ ಈ ಮಾನವೀಯ ಕಾರ್ಯ ಸ್ಥಳೀಯ ಜನರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಸಮಾಜದಲ್ಲಿ ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಸ್ಪೂರ್ತಿದಾಯಕ ಕಾರ್ಯವಾಗಿದೆ. ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಸದಾ ಸ್ಪಂದಿಸುವ ಅವರ ಸೇವಾ ಮನೋಭಾವ ಇತರ ಉದ್ಯಮಿಗಳು ಹಾಗೂ ದಾನಿಗಳಿಗೂ ಮಾದರಿಯಾಗಿದೆ.

LEAVE A REPLY

Please enter your comment!
Please enter your name here