ನವದೆಹಲಿ : ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ Unique Identification Authority of India (UIDAI) ತನ್ನ ಹೊಸ ಪ್ರಕಟಣೆಯಲ್ಲಿ ಆಧಾರ್ ಮೊಬೈಲ್ ಆಪ್ ಮೂಲಕ ಇ-ಮೇಲ್ ವಿಳಾಸ ನವೀಕರಣ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಪ್ರಸ್ತುತ ಆಧಾರ್ ಮೊಬೈಲ್ ಆಪ್ ಮೂಲಕ ಇ-ಮೇಲ್ ವಿಳಾಸವನ್ನು ನವೀಕರಿಸಲು ₹75 ಶುಲ್ಕ ವಿಧಿಸಲಾಗುತ್ತಿದ್ದು, ಈ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲು UIDAI ನಿರ್ಧರಿಸಿದೆ.
UIDAI ಅಧಿಸೂಚನೆಯ ಪ್ರಕಾರ, 2026ರ ಜುಲೈ 1ರಿಂದ ಡಿಸೆಂಬರ್ 31ರವರೆಗೆ ಆಧಾರ್ ಮೊಬೈಲ್ ಆಪ್ ಮೂಲಕ ಇ-ಮೇಲ್ ವಿಳಾಸ ನವೀಕರಿಸುವ ಸೇವೆ ಸಂಪೂರ್ಣ ಉಚಿತವಾಗಿರಲಿದೆ. ಈ ಅವಧಿಯಲ್ಲಿ ಬಳಕೆದಾರರು ಯಾವುದೇ ಶುಲ್ಕ ಪಾವತಿಸದೆ ತಮ್ಮ ಇ-ಮೇಲ್ ಐಡಿಯನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು.
ಆಧಾರ್‌ಗೆ ಇ-ಮೇಲ್ ಐಡಿ ಲಿಂಕ್ ಆಗಿದ್ದರೆ, ಆಧಾರ್‌ಗೆ ಸಂಬಂಧಿಸಿದ ಪ್ರಮುಖ ಮಾಹಿತಿ, ನೋಟಿಫಿಕೇಶನ್‌ಗಳು ಹಾಗೂ ವ್ಯವಹಾರಗಳ ವಿವರಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲು ಅನುಕೂಲವಾಗುತ್ತದೆ.
ಇತ್ತೀಚೆಗೆ UIDAI ಹೊಸ Aadhaar Mobile App ಅನ್ನು ಪರಿಚಯಿಸಿದ್ದು, ಆಧಾರ್ ಸೇವೆಗಳನ್ನು ಇನ್ನಷ್ಟು ಸುರಕ್ಷಿತ ಮತ್ತು ಸುಲಭಗೊಳಿಸುವ ಉದ್ದೇಶ ಹೊಂದಿದೆ.
ಆದರೆ ಈ ಉಚಿತ ಸೌಲಭ್ಯ ಡಿಸೆಂಬರ್ 31, 2026ರವರೆಗೆ ಮಾತ್ರ ಲಭ್ಯವಿದ್ದು, ಬಳಿಕ ಸೇವೆಯನ್ನು ಮುಂದುವರಿಸಬೇಕೇ ಎಂಬ ಬಗ್ಗೆ UIDAI ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಆದ್ದರಿಂದ ಆಧಾರ್ ಕಾರ್ಡ್‌ಧಾರಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಇ-ಮೇಲ್ ವಿಳಾಸವನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು.

