ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜಿಸ್ಟಿಕ್ಸ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಅವರ ಸ್ನೇಹಿತರ ಮೇಲೆ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಅಮಾನುಷವಾಗಿ ರ‍್ಯಾಗಿಂಗ್ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪದ ಘಟನೆ ಬೆಳಕಿಗೆ ಬಂದಿದೆ.
ಕೇರಳದ ತ್ರಿಶೂರ್ ಮೂಲದ 19 ವರ್ಷದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ಹಾಗೂ ಅವರ ಸಹಪಾಠಿ ರ‍್ಯಾಗಿಂಗ್‌ಗೆ ಒಳಗಾದವರಾಗಿದ್ದು, ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಕಮಿಷನರ್ ನೀಡಿದ ಮಾಹಿತಿಯಂತೆ, ಸೆ.19ರಂದು ಮಧ್ಯಾಹ್ನ ವಿದ್ಯಾರ್ಥಿಗಳು ಕಾಲೇಜಿನ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ಅಡ್ಡಗಟ್ಟಿ ಬೈಕ್‌ನಲ್ಲಿ ಬಲವಂತವಾಗಿ ಕರೆದೊಯ್ದಿದೆ ಎನ್ನಲಾಗಿದೆ. ಬಳಿಕ ನಿರ್ಜನ ಮನೆಯೊಂದರ ಕೊಠಡಿಯಲ್ಲಿ ಕೂಡಿಹಾಕಿ ಹೊರಗಿನಿಂದ ಬೀಗ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊಠಡಿಯಲ್ಲಿ ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಕೇವಲ ಒಳಉಡುಪಿನಲ್ಲಿ ನಿಲ್ಲಿಸಿ, ಅವರು ಕೂಗದಂತೆ ಬಾಯಿಗೆ ಬಟ್ಟೆ ತುರುಕಲಾಗಿದೆ. ಬಳಿಕ ಬೆಲ್ಟ್ ಮತ್ತು ಹ್ಯಾಂಗರ್‌ಗಳಿಂದ ಹಲ್ಲೆ ನಡೆಸಲಾಗಿದ್ದು, ಆರೋಪಿಯೊಬ್ಬರು ಕಬ್ಬಿಣದ ಪಂಚ್‌ನಿಂದ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಿಂದ ಬಸವಳಿದ ವಿದ್ಯಾರ್ಥಿಗಳು ನೀರು ಕೇಳಿದಾಗ ಕಲುಷಿತ ನೀರನ್ನು ತಂದು ಅವರ ಮೈಮೇಲೆ ಚೆಲ್ಲಿದ್ದಾರೆ ಎನ್ನಲಾಗಿದ್ದು, ಘಟನೆಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಸಂಜೆ ಸುಮಾರು 6 ಗಂಟೆಯವರೆಗೆ ವಿದ್ಯಾರ್ಥಿಗಳನ್ನು ಕೂಡಿಹಾಕಿ ದೌರ್ಜನ್ಯ ನಡೆಸಿದ ಬಳಿಕ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕಾಲೇಜಿನಲ್ಲಿ ಚಾಕುವಿನಿಂದ ಹಲ್ಲೆ ನಡೆಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಕಾಲೇಜಿಗೆ ಬರುವಾಗ ಕ್ಲೀನ್ ಶೇವ್ ಮಾಡಿಕೊಂಡು ಬರಬೇಕು ಹಾಗೂ ಶೂ ಧರಿಸಬಾರದು ಎಂದು ಸೂಚಿಸಿದ್ದರು ಎನ್ನಲಾಗಿದೆ.
ಘಟನೆಯಿಂದ ಭಯಭೀತರಾದ ವಿದ್ಯಾರ್ಥಿಗಳು ಊರಿಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಕುಟುಂಬಸ್ಥರ ಧೈರ್ಯದ ಬಳಿಕ ಮಂಗಳೂರಿಗೆ ಮರಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಒಟ್ಟು 9 ಮಂದಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

