ತುಳುವರ್ಲ್ಡ್ ಫೌಂಡೇಶನ್ ಜೊತೆ ಸಹಕಾರ ಒಪ್ಪಂದಕ್ಕೆ ನಿರ್ಧಾರ ತುಳು ಸಂಸ್ಕೃತಿಗೆ ಶೈಕ್ಷಣಿಕ ವೇದಿಕೆ
ವರದಿ ÷ ತುಳುನಾಡು ವಾರ್ತೆ
ಬೆಂಗಳೂರು : ದಕ್ಷಿಣ ಭಾರತದ ಪ್ರಥಮ ಖಾಸಗಿ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಲಯನ್ಸ್ ಯೂನಿವರ್ಸಿಟಿಯಲ್ಲಿ, ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಅಧ್ಯಯನಕ್ಕೆ ಸಂಬಂಧಿಸಿದ ನಾಲ್ಕು ವಿಶೇಷ ಕೋರ್ಸುಗಳನ್ನು ಆರಂಭಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಅಲಯನ್ಸ್ ಯೂನಿವರ್ಸಿಟಿಯಲ್ಲಿ ನಡೆದ *ಬೆಮ್ಮರ್ ಬೊಕ್ಕ ಲೆಕ್ಕಿಸಿರಿ – ರಾಷ್ಟ್ರೀಯ ತುಳು ವಿಚಾರ ಸಂಕೀರ್ಣ ದ ಸಂದರ್ಭ, ಅಲಯನ್ಸ್ ಯೂನಿವರ್ಸಿಟಿ ಮತ್ತು ತುಳುವರ್ಲ್ಡ್ ಫೌಂಡೇಶನ್ ನಡುವೆ ಸಹಕಾರ ಒಪ್ಪಂದಕ್ಕೆ ಮುಂದಾಗುವ ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.
ಈ ಸಹಕಾರದ ಮೂಲಕ ಅಲಯನ್ಸ್ ಯೂನಿವರ್ಸಿಟಿಯಲ್ಲಿ ಕೆಳಕಂಡ ನಾಲ್ಕು ವಿಶೇಷ ಕೋರ್ಸುಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ :
* ತುಳು ಲಿಪಿ ಸರ್ಟಿಫಿಕೇಟ್ ಕೋರ್ಸ್
* ತುಳುನಾಡ ಕಳರಿ ಮರ್ಮ ಕ್ರಿಯೆ ಸರ್ಟಿಫಿಕೇಟ್ ಕೋರ್ಸ್
* ತುಳುನಾಡ ಕಳರಿ ಡಿಪ್ಲೋಮಾ ಕೋರ್ಸ್
* ತುಳು ಡಿಪ್ಲೋಮಾ ಕೋರ್ಸ್
ಇದರೊಂದಿಗೆ ಸಂಶೋಧನೆ ಹಾಗೂ ಕ್ಷೇತ್ರಾಧಾರಿತ ಅಧ್ಯಯನವನ್ನು ಬಲಪಡಿಸುವ ಉದ್ದೇಶದಿಂದ, ಬಸ್ರೂರು ಅಧ್ಯಯನ ಕೇಂದ್ರ ಮತ್ತು ಪಡ್ಡೆಡ್ರ (ಪಡುಬಿದ್ರೆ) ಅಧ್ಯಯನ ಕೇಂದ್ರ ಎಂಬ ಎರಡು ವಿಶೇಷ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಸಹ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕೋರ್ಸುಗಳು ತುಳು ಭಾಷೆ, ಲಿಪಿ, ಜಾನಪದ, ಆದಿ ಆರಾಧನೆಗಳು, ಕಳರಿ ಪರಂಪರೆ ಹಾಗೂ ಮರ್ಮ ಜ್ಞಾನವನ್ನು ಶೈಕ್ಷಣಿಕ ಮತ್ತು ಸಂಶೋಧನಾ ಆಧಾರದಲ್ಲಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಗ್ರ ವ್ಯವಸ್ಥೆಯನ್ನು ರೂಪಿಸಲಿವೆ.
ರಾಷ್ಟ್ರಮಟ್ಟದ ವಿದ್ಯಾರ್ಥಿಗಳಿಗೆ ತುಳುನಾಡಿನ ವಿಶಿಷ್ಟ ಪರಂಪರೆಯನ್ನು ವೈಜ್ಞಾನಿಕ ಹಾಗೂ ಅಕಾಡೆಮಿಕ್ ದೃಷ್ಟಿಕೋನದಲ್ಲಿ ಅಧ್ಯಯನ ಮಾಡುವ ಅಪೂರ್ವ ಅವಕಾಶ ಇದರಿಂದ ದೊರೆಯಲಿದೆ. ಈ ನಿರ್ಧಾರದಿಂದ ತುಳುನಾಡಿನ ಅಧ್ಯಯನವು ಕೇವಲ ಸಾಂಸ್ಕೃತಿಕ ವಲಯಕ್ಕೆ ಸೀಮಿತವಾಗದೆ, ವಿಶ್ವವಿದ್ಯಾಲಯ ಮಟ್ಟದ ಅಧಿಕೃತ ಶೈಕ್ಷಣಿಕ ವಿಭಾಗಕ್ಕೂ ಪ್ರವೇಶಿಸಲಿದೆ. ಇದು ತುಳು ಭಾಷೆ ಮತ್ತು ಸಂಸ್ಕೃತಿಗೆ ರಾಷ್ಟ್ರಮಟ್ಟದ ಗೌರವವನ್ನು ತಂದುಕೊಡುವುದರ ಜೊತೆಗೆ, ಅದರ ಜಾಗತೀಕರಣದ ದಿಕ್ಕಿನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುವ ಮಹತ್ವದ ಹೆಜ್ಜೆಯಾಗಿದೆ.
ಈ ಸಂದರ್ಭದಲ್ಲಿ ಅಲಯನ್ಸ್ ಯೂನಿವರ್ಸಿಟಿಯ ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ, ಡಾ. ಎ.ಎಂ ಶ್ರೀಧರನ್, ಶೃತಿ ಚಂದ್ರಶೇಖರ್ ಹಾಗೂ ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ನಿರ್ದೇಶಕರಾದ ಡಾ. ರಾಜೇಶ್ ಆಳ್ವ ಹಾಗೂ ತುಳುನಾಡಿನ ಪ್ರಮುಖರಾದ, ಡಾ. ಬಿ. ಎಸ್. ಶಿವಕುಮಾರ್ ಕುಪ್ಪಂ ಯುನಿವರ್ಸಿಟಿ, ಧರ್ಮಪಾಲ ಯು. ದೇವಾಡಿಗ, ಡಾ. ಗಣೇಶ್ ಅಮೀನ್ ಸಂಕಮಾರ್, ಡಾ. ವೈ ಎನ್ ಶೆಟ್ಟಿ, ದೇವೇಂದ್ರ ಶೆಟ್ಟಿ ಕೊಕ್ರಡಿ, ಡಾ. ಎಂ. ಕೆ. ಮಾಧವ, ಶ್ರೀಕಾಂತ್ ಶೆಟ್ಟಿ ಕಾರ್ಕಳ, ನವೀನ್ ಶೆಟ್ಟಿ, ದೇವಾನಂದ ಶೆಟ್ಟಿ ಬಸ್ರೂರು, ಎಡ್ಮೆಮಾರ್, ಡಾ ಕಿಶೋರ್ ರೈ, ಪ್ರಮೋದ್ ಸಪ್ರೆ, ಶೇಣಿ, ಜಯಲಕ್ಷ್ಮಿ ಆರ್. ಶೆಟ್ಟಿ, ಅರವಿಂದ ಬೆಲ್ಚಾಡ, ಪುನೀತ್ ತುಳುನಾಡು ವಾರ್ತೆ, ಮಂದಾರ ರಾಜೇಶ್ ಭಟ್ ಬೆಂಗಳೂರಿನ ಸಂಘಟನೆಗಳ ಪ್ರಮುಖರಾದ ದಿನೇಶ್ ಹೆಗ್ಡೆ, ಶಾಂತರಾಮ್ ವಿ. ಶೆಟ್ಟಿ, ರಾಜಾರಾಮ್ ಶೆಟ್ಟಿ ಉಪ್ಪಳ, ಪುರುಷೋತ್ತಮ ಚೆಂಡ್ಲಾ , ಡಾ. ಕೆ. ಎನ್. ಅಡಿಗ ಹಾಗೂ ಇನ್ನಿತರರು ಅಂತೆಯೇ ತುಳುವ ಮಹಾಸಭೆಯ ಸಂಚಾಲಕರಾದ ನ್ಯಾಯವಾದಿ ಮೊರ್ಲ ರತ್ನಾಕರ ಶೆಟ್ಟಿ ಮುಂಬೈ, ಜಯಪ್ರಕಾಶ್ ಪೂಜಾರಿ ಮುಂಬೈ, ಭಾನುಮತಿ ಶೆಟ್ಟಿ ಮುಲ್ಕಿ, ರಾಘವೇಂದ್ರ ಶೆಟ್ಟಿ ಉಡುಪಿ, ಹರಿಪ್ರಸಾದ್ ರೈ ಮಂಗಳೂರು, ವಿಶ್ವನಾಥ ಆಚಾರ್ಯ ಉಡುಪಿ, ಆಶಾ ಹೆಗಡೆ ಬ್ರಹ್ಮಾವರ, ಪದ್ಮಶ್ರೀ ಭಟ್ ಮೂಡುಬಿದ್ರಿ ಮೊದಲಾದ ನೂರಕ್ಕಿಂತ ಹೆಚ್ಚು ಪ್ರಮುಖರು ಸಾಕ್ಷಿ ವಹಿಸಿದರು.

