ಕುಂದಾಪುರದಲ್ಲಿ ಗಿಡದ ವಿಚಾರಕ್ಕೆ ಗಲಾಟೆ: ಮಹಿಳೆ ಮೇಲೆ ಹಲ್ಲೆ ಆರೋಪ

0
25

ಕುಂದಾಪುರ : ಮನೆಯ ಎದುರಿನ ಗಿಡವನ್ನು ತೆಗೆಯದಂತೆ ಪುರಸಭೆ ಸಿಬ್ಬಂದಿಗೆ ತಿಳಿಸಿದ್ದಕ್ಕೆ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪ ಕುಂದಾಪುರದಲ್ಲಿ ಕೇಳಿಬಂದಿದೆ.

ಕುಂದಾಪುರದ ಚರ್ಚ್‌ ರೋಡ್‌ ನಿವಾಸಿ ಅನಿತಾ ಶೇಟ್‌ (47) ಅವರು ಆಗಸ್ಟ್‌ 28ರಂದು ಬೆಳಗ್ಗೆ ಸುಮಾರು 10.15ರ ವೇಳೆಗೆ ಮನೆಯಲ್ಲಿದ್ದರು. ಈ ವೇಳೆ ಪುರಸಭೆ ಸಿಬ್ಬಂದಿ ರಸ್ತೆ ಬದಿಯ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕಾಗಿ ಅಲ್ಲಿಗೆ ಆಗಮಿಸಿದ್ದರು.

ಮನೆಯ ಎದುರಿನ ಕ್ರೊಟಾನ್ ಗಿಡವನ್ನು ತೆಗೆಯದಂತೆ ಅನಿತಾ ಶೇಟ್‌ ಅವರು ಪುರಸಭೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಈ ವೇಳೆ ಪಕ್ಕದ ಮನೆಯ ನಿವಾಸಿಗಳಾದ ವೆಂಕಟೇಶ ಕಾಮತ್‌ ಹಾಗೂ ರಾಮಚಂದ್ರ ಖಾರ್ವಿ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಂತರ ಇಬ್ಬರೂ ತಮ್ಮ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದು, ಎಳೆದು ಕೆನ್ನೆ, ತಲೆ ಹಾಗೂ ಕಣ್ಣಿನ ಭಾಗಕ್ಕೆ ಹೊಡೆದಿದ್ದಾರೆ ಎಂದು ಅನಿತಾ ಶೇಟ್‌ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಿಂದ ಮಹಿಳೆಗೆ ಗಾಯಗಳಾಗಿದ್ದು, ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಲಾಗಿದೆ ಎನ್ನಲಾದ ಕಾರಣ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.