ಸತ್ಯಸಾಯಿ ಗ್ರಾಮಕ್ಕೆ ಸುವರ್ಣ ಸಂಭ್ರಮ

0
4

50 ವರ್ಷಗಳ ಸಂಭ್ರಮಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವದ ಮೆರುಗು – ನ. 26ರಂದು ಮುದ್ದೇನಹಳ್ಳಿಯಲ್ಲಿ ಅದ್ಧೂರಿ ಕಾರ್ಯಕ್ರಮ

-ಮಂದಾರ ರಾಜೇಶ್

ಮುದ್ದೇನಹಳ್ಳಿ : ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮವು 50 ವರ್ಷಗಳ ಸಂಭ್ರಮಕ್ಕೆ ಸಜ್ಜಾಗುತ್ತಿದೆ.

ಈ ಸುವರ್ಣ ಮಹೋತ್ಸವದ ಅಂಗವಾಗಿ ನವೆಂಬರ್ 26ರಂದು ಸಂಜೆ 4 ಗಂಟೆಗೆ ಸತ್ಯಸಾಯಿ ಗ್ರಾಮದ ಸಾಯಿ ಕೃಷ್ಣನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದೊಂದಿಗೆ ಭವ್ಯ ಸಾಂಸ್ಕೃತಿಕ ಸಂಭ್ರಮ ಆಯೋಜಿಸಲಾಗಿದೆ.

‘ಒಂದು ಜಗತ್ತು, ಒಂದು ಕುಟುಂಬ’ ಎಂಬ ಉದಾತ್ತ ಪರಿಕಲ್ಪನೆಯೊಂದಿಗೆ ಜಾಗತಿಕ ಮಟ್ಟದಲ್ಲಿ ನಿಸ್ವಾರ್ಥ ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿರುವ ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ಸತ್ಯಸಾಯಿ ಗ್ರಾಮವು ಸೇವಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಬೆಳೆದು ಬಂದಿದೆ.

ಜಾತಿ, ಧರ್ಮ, ಭಾಷೆಗಳ ಭೇದವಿಲ್ಲದೆ ಎಲ್ಲರನ್ನೂ ಒಂದೇ ಕುಟುಂಬವೆಂಬ ಭಾವನೆಯಿಂದ ಕಾಣುವ ಆಶಯದೊಂದಿಗೆ ಉಚಿತ ಆರೋಗ್ಯ ಸೇವೆ, ಶಿಕ್ಷಣ, ಮಕ್ಕಳ ಪೋಷಣೆ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಪ್ರಸಾರಕ್ಕೆ ಆದ್ಯತೆ ನೀಡಲಾಗುತ್ತಿದೆ.

ಮಾನವೀಯ ಸೇವೆ, ಶಿಕ್ಷಣ ಮತ್ತು ಸಂಸ್ಕೃತಿಯ ಸಮನ್ವಯಕ್ಕೆ ಸಾಕ್ಷಿಯಾಗಿರುವ ಸತ್ಯಸಾಯಿ ಗ್ರಾಮದ ಸುವರ್ಣ ಸಂಭ್ರಮಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ತಂಡವು ವಿಶೇಷ ಮೆರುಗು ನೀಡಲಿದೆ. ಆಳ್ವಾಸ್‌ನ ಕಲಾವಿದರು ವಿವಿಧ ಕಲಾಪ್ರಕಾರಗಳ ಮೂಲಕ ಭಾರತದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಅನಾವರಣಗೊಳಿಸಲಿದ್ದಾರೆ.

ಸಾಂಸ್ಕೃತಿಕ ವೈವಿಧ್ಯ, ಕಲಾ ವೈಭವ ಹಾಗೂ ಸೇವಾ ಸಂಕಲ್ಪದ ಸಂಗಮವಾಗಲಿರುವ ಈ ಕಾರ್ಯಕ್ರಮವು ಸತ್ಯಸಾಯಿ ಗ್ರಾಮದ ಸುವರ್ಣ ಸಂಭ್ರಮಕ್ಕೆ ವಿಶೇಷ ಕಳೆ ನೀಡಲಿದೆ.