ತಣ್ಣೀರುಬಾವಿ ಸೇತುವೆ ಕಾಮಗಾರಿ ವೇಳೆ ಅವಘಡ : ನದಿಗೆ ಬಿದ್ದ ಕ್ರೇನ್, ಬೋಟ್ ಮುಳುಗಡೆ!

0
2

ಮಂಗಳೂರು : ನಗರದ ತಣ್ಣೀರುಬಾವಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಭೀಕರ ಅವಘಡ ಸಂಭವಿಸಿದ್ದು, ಕ್ರೇನ್ ಒಂದು ನೀರಿಗೆ ಉರುಳಿದ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಬೆಳಗ್ಗೆ ಸುಮಾರು 9.20ರ ವೇಳೆಗೆ ಸೇತುವೆಯ ಸ್ಲ್ಯಾಬ್ ಅಳವಡಿಸುವ ಕಾರ್ಯಕ್ಕಾಗಿ ಎರಡು ಬೃಹತ್ ಕ್ರೇನ್‌ಗಳನ್ನು ಬಳಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಂದು ಕ್ರೇನ್ ನಿಯಂತ್ರಣ ತಪ್ಪಿ ನದಿಯ ನೀರಿಗೆ ಉರುಳಿದೆ ಎನ್ನಲಾಗಿದೆ.

ಇದೇ ವೇಳೆ ಸೇತುವೆಯ ಸ್ಲ್ಯಾಬ್ ಬೋಟ್ ಮೇಲೆ ಬಿದ್ದ ಪರಿಣಾಮ ಬೋಟ್ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಘಟನೆಯಿಂದ ಕಾಮಗಾರಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಕಾರ್ಮಿಕರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸಿದ ಈ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕ್ರೇನ್ ನಿಯಂತ್ರಣ ತಪ್ಪಲು ಕಾರಣವೇನು ಹಾಗೂ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.