ಮಾಸ್ತಿ ಮೆಚ್ಚಿದ ಮಹತ್ವದ ಕವಿ ಭಾ.ಭ.ಮಜಿಬೈಲು : ಕ.ಸಾ.ಪ.ದತ್ತಿ ಉಪನ್ಯಾಸದಲ್ಲಿ ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ

0
7

ಮಂಗಳೂರು : ‘ನಮ್ಮ ತರುಣ ಕವಿಗಳು ಹಲವರು ಛಂದಸ್ಸಿಲ್ಲದಿರುವುದೇ ಕಾವ್ಯದ ಲಕ್ಷಣ ಎಂಬಂತೆ ಕೃತಿ ರಚನೆ ಮಾಡುತ್ತಿರುವುದರಿಂದ ತಾನು ಯಾವುದೇ ಕವನ ಸಂಗ್ರಹಕ್ಕೆ ಮುನ್ನುಡಿ ಬರೆಯುವುದಿಲ್ಲ ಎಂದಿರುವ ಕನ್ನಡದ ಆಸ್ತಿ ಮಾಸ್ತಿಯವರು, ಮ.ಭ.ಮಜಿಬೈಲು ಅವರು ಕನ್ನಡ ನುಡಿಯ ಚೆಲುವನ್ನು ಬಲ್ಲ ಮಹತ್ವದ ಕವಿ ಎಂದು ಮೆಚ್ಚು ನುಡಿಗಳನ್ನಾಡಿರುವುದು ದಿ| ಭಾಸ್ಕರ ಭಂಡಾರಿ ಅವರ ಕವಿತೆಗಳ ತೂಕವನ್ನು ಹೆಚ್ಚಿಸಿದೆ’ ಎಂದು ಸಾಹಿತಿ, ಪ್ರಾಧ್ಯಾಪಕ ಹಾಗೂ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು, ಶಾರದಾ ಪದವಿ ಪೂರ್ವ ಕಾಲೇಜು, ಮಂಗಳೂರು ಕನ್ನಡ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊಡಿಯಾಲ ಬೈಲ್ ಶಾರದಾ ವಿದ್ಯಾಲಯದಲ್ಲಿ ಜರಗಿದ ಸಾಹಿತಿ ಭ.ಭಾ.ಮಜಿಬೈಲು ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಭಾಸ್ಕರ ಭಂಡಾರಿ ಮಜಿಬೈಲು ಅವರು ಕನ್ನಡ,ಇಂಗ್ಲಿಷ್, ಅರ್ಥಶಾಸ್ತ್ರ ಮತ್ತು ಕಾನೂನು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಬ್ಯಾಂಕ್ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಹೊಂದಿ ಬಳಿಕ ವಕೀಲಿ ವೃತ್ತಿ ಕೈಗೊಂಡವರು. ಅದರೊಂದಿಗೆ ಕನ್ನಡದಲ್ಲಿ ಏಳು ಹಾಗೂ ತುಳು ಭಾಷೆಯಲ್ಲಿ ಎರಡು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ ಸಾಹಿತಿಗಳು. ಅವರ ‘ನೆನಹು’ ಎಂಬ ಚೊಚ್ಚಲ ಕವನ ಸಂಕಲಕ್ಕೆ, ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೊಟ್ಟ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುನ್ನುಡಿ ಬರೆದಿದ್ದು, ಗಡಿನಾಡ ಕವಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಬೆನ್ನುಡಿ ಬರೆದಿದ್ದಾರೆ ಎಂದಾಗ ಅವರ ಕಾವ್ಯ ಶಕ್ತಿಗೆ ಬೇರೆ ಸಾಕ್ಷಿ ಬೇಕಿಲ್ಲ’ ಎಂದ ಭಾಸ್ಕರ ರೈ ಕುಕ್ಕುವಳ್ಳಿ ದಿವಂಗತರ ಕೆಲವು ಕವನಗಳನ್ನು ಉದ್ಧರಿಸಿ ಸೋದಾಹರಣವಾಗಿ ಮಾತನಾಡಿದರು.

ಶಾರದಾ ಶಾಲೆಗೆ ಹಲವು ಕೃತಿಗಳನ್ನು ದಾನ ಮಾಡಿ ಸ್ವರ್ಗಸ್ಥರಾದ ಭಾಸ್ಕರ ಭಂಡಾರಿ ಮಜಿಬೈಲು ಅವರ ಸ್ಮರಣೆಯಲ್ಲಿ ಪ್ರಸ್ತುತ ಅಮೇರಿಕಾದಲ್ಲಿರುವ ಪತ್ನಿ ಸವಿತಾ ಭಾಸ್ಕರ ಭಂಡಾರಿ ಮತ್ತು ಮಕ್ಕಳು ದಾನಿಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರಾ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ. ಪಿ ಶ್ರೀನಾಥ್ ವಹಿಸಿದ್ದರು.

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ|ಮಂಜುನಾಥ ಎಸ್. ರೇವಣ್ಕರ್, ಭಾಸ್ಕರ ಭಂಡಾರಿ ಮಜಿಬೈಲು ಅವರ ಅಳಿಯ ಉದಯಕುಮಾರ್ ಶೆಟ್ಟಿ, ಉದ್ಯಮಿ ಅಡ್ಯಾರ್ ಮಾಧವ ನಾಯ್ಕ್‌, ಶಾರದಾ ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರಕಾಶ್‌ ನಾಯ್ಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಯಶೋದಾ ಕುಮಾರಿ ನಿರೂಪಿಸಿದರು. ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ಅಣಕು ಪ್ರದರ್ಶನ ನೀಡಿ ಸಭೆಯನ್ನು ರಂಜಿಸಿದರು.

LEAVE A REPLY

Please enter your comment!
Please enter your name here