ಮಂಗಳೂರು : ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಜನರಿಗೆ ಹಾಸ್ಯದ ರೀತಿಯಲ್ಲಿ ಬಯ್ಯುತ್ತಾ ವೈರಲ್ ಆಗಿದ್ದ ಆಶಾ ಪಂಡಿತ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆಶಾ ಪಂಡಿತ್ ರವರು ಅಳಪೆ ಬಳಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದು ಅಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಗಳನ್ನು ಮಾಡಿ ಫೇಮಸ್ ಆಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಶೈಲಿಯಿಂದ ಗುರುತಿಸಿಕೊಂಡಿದ್ದ ಅಶಾ ಪಂಡಿತ್, ಪಡೀಲ್ ಸಮೀಪ ಸಣ್ಣ ಅಂಗಡಿಯನ್ನು ನಡೆಸುತ್ತಾ ಸರಳ ಜೀವನ ನಡೆಸುತ್ತಿದ್ದರು. ಸಾಮಾನ್ಯ ವ್ಯಕ್ತಿಯಾಗಿದ್ದರೂ ಅವರ ರೀಲ್ಸ್‌ಗಳು ಸಾವಿರಾರು ಅಭಿಮಾನಿಗಳನ್ನು ಸೆಳೆದಿದ್ದವು.
ಕುಟುಂಬ ಮೂಲಗಳ ಮಾಹಿತಿ ಪ್ರಕಾರ, ಗುರುವಾರ ರಾತ್ರಿ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡು ವಾಂತಿ ಆಗಿತ್ತು. ಶುಕ್ರವಾರ ಮುಂಜಾನೆ ಮನೆ ಅಂಗಳದಲ್ಲೇ ಅಚಾನಕ್ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಅಶಾ ಪಂಡಿತ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಸಂದೇಶಗಳು ಹರಿದುಬಂದಿದ್ದು, ಅಭಿಮಾನಿಗಳು ಹಾಗೂ ಸ್ಥಳೀಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

