ಉಡುಪಿ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಜೂನ್ನ ಮುಂಗಾರು ಮಳೆ ಆರಂಭ ಆಗುವವರೆಗೆ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕುವಾರು ನೀಡಿರುವ ವರದಿ ಆನ್ವಯ ಮುಂದಿನ ಮೇ 15 ರ ವರೆಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಆದರೂ ಈಗಿನಿಂದಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ನೀರು ಸರಬರಾಜಿಗೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕಾರ್ಕಳದ 14, ಕುಂದಾಪುರದ 36, ಬೈಂದೂರಿನ 15, ಉಡುಪಿಯ 9, ಬ್ರಹ್ಮಾವರದ 13, ಕಾಪುವಿನ 4 ಹಾಗೂ ಹೆಬ್ರಿ ತಾಲೂಕಿನಲ್ಲಿ 2 ಗ್ರಾಮ ಪಂಚಾಯಿತಿ, ಸಾಲಿಗ್ರಾಮದ 5 ಹಾಗೂ ಬೈಂದೂರಿನ 19 ವಾರ್ಡ್ಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆಗಳಿವೆ. ನೀರಿನ ಕೊರತೆ ಕಂಡುಬಂದಲ್ಲಿ ಹತ್ತಿರದ ಖಾಸಗಿ ಬಾವಿಗಳನ್ನು ಗುರುತಿಸಿ ಇಟ್ಟುಕೊಂಡು ತಕ್ಷಣಕ್ಕೆ ನೀರು ನೀಡಲು ಸನ್ನದ್ಧರಾಗಿರಬೇಕು ಎಂದರು.
ಮೇವು ದಾಸ್ತಾನು
ಸರ್ಕಾರಿ ಬಾವಿಗಳು, ಕೆರೆಗಳು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಪ್ರಾಣಿ, ಪಕ್ಷಿಗಳಿಗೆ ನೀರನ್ನು ಕುಡಿಯಲು ಅನುಕೂಲ ಮಾಡಿಕೊಡಬೇಕು. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ದನಕರುಗಳಿಗೆ ಮೇವಿನ ಕೊರತೆ ಕಂಡು ಬಂದಿಲ್ಲ. ಪ್ರಸ್ತುತ ಎಲ್ಲಾ ತಾಲೂಕುಗಳಲ್ಲಿ ಮುಂದಿನ 38 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ ಎಂದರು.
ಬೇಸಿಗೆ ದಿನಗಳಲ್ಲಿ ಅಗ್ನಿ ಅನಾಹುತಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಅಗ್ನಿ ಅನಾಹುತಗಳು ಉಂಟಾದಲ್ಲಿ ಕೂಡಲೇ ಸ್ಪಂದಿಸಲು ಸನ್ನದ್ಧರಾಗಿರಬೇಕು.. ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್ ಮಾಡಿ ವರದಿಯನ್ನು ನೀಡಬೇಕು. ಅರಣ್ಯ ಪ್ರದೇಶಗಳಲ್ಲಿ ಅಗ್ನಿ ಅನಾಹುತ ಉಂಟಾಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಜನರು ಸಾಧ್ಯವಾದಷ್ಟು ಗರಿಷ್ಠ ತಾಪಮಾನದ ಅವಧಿ ಅಂದರೆ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು ಎಂದರು.
ಪೂರ್ವ ಮುಂಗಾರು ಮಳೆಗಾಲದಲ್ಲಿ ಗುಡುಗು, ಸಿಡಿಲುಗಳಿಂದ ಅಪಾಯ ತಪ್ಪಿಸಲು ತೆಗೆದುಕೊಳ್ಳಬಹುದಾದ ಮುಂಜಾಗ್ರತ ಕ್ರಮಗಳ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್. ಎಸ್. ಕಾದ್ರೋಳ್ಳಿ, ಸಹಾಯಕ ಕಮಿಶನರ್ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.

