ಕಡಬ ತಾಲೂಕು ತುಳುವ ಮಹಾಸಭೆ ಸಂಚಾಲಕಿಯಾಗಿ ಅಶಾ ರೈ ಸವಣೂರು ನೇಮಕ

0
61

ಕಡಬ: ತುಳುನಾಡಿನ ಭಾಷಾ–ಸಂಸ್ಕೃತಿಯ ಪುನಶ್ಚೇತನಕ್ಕಾಗಿ ಶತಮಾನೋತ್ಸವದ ದಿಕ್ಕಿನಲ್ಲಿ ಚುರುಕು ಹೊಂದಿಸಿರುವ ತುಳುವ ಮಹಾಸಭೆ ತನ್ನ ಚಟುವಟಿಕೆಗಳಿಗೆ ಶಕ್ತಿ ನೀಡುವ ಪ್ರಯತ್ನದಲ್ಲಿ ಕಡಬ ತಾಲೂಕಿಗೆ ಪ್ರಕೃತಿಪ್ರಿಯ ಸಮಾಜಮುಖಿ ಕೃಷಿಕೆಯಾಗಿರುವ ಅಶಾ ರೈ ಸವಣೂರು ಅವರನ್ನು ತಾಲೂಕು ಸಂಚಾಲಕಿಯಾಗಿ ನೇಮಕ ಮಾಡಿದೆ.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅಶಾ ರೈ, ‘ಲಾಯರ್ಸ್ ಕಲೆಕ್ಟಿವ್’, ‘ಅಜೀಮ್ ಪ್ರೇಮ್ಜಿ ಫೌಂಡೇಶನ್’ ಮುಂತಾದ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ 12 ವರ್ಷಗಳಿಗಿಂತಲೂ ಹೆಚ್ಚು ಕಾಲ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ದಾಖಲೆ ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಇದೀಗ ಅವರು ಇತ್ತೀಚೆಗಷ್ಟೆ ತವರು ನಾಡಾದ ಸವಣೂರಿಗೆ ಮರಳಿ ಪೂರ್ಣಕಾಲಿಕ ಕೃಷಿಕೆಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರಾಕೃತಿಕ ಕೃಷಿಯ ಏಕೀಕೃತ ದೃಷ್ಟಿಕೋಣದೊಂದಿಗೆ ವರ್ಮಿ ಕಾಂಪೋಸ್ಟ್, ಟ್ರೈಕೋಡರ್ಮಾ ಮುಂತಾದ ಜೈವಿಕ ಉತ್ಪನ್ನಗಳನ್ನು ತಯಾರಿಸುತ್ತಾ ಪಕ್ಕದ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಕೃಷಿಯಲ್ಲಿ ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅವರು ಸಾವನೂರು MPCS (ಹಾಲು ಉತ್ಪಾದಕರ ಸಹಕಾರ ಸಂಘ) ಉಪಾಧ್ಯಕ್ಷೆಯಾಗಿದ್ದು, ಕ್ರೀಡೆ ಮತ್ತು ಚಿತ್ರಕಲೆಯ ಹಿರಿಯ ಚಟುವಟಿಕೆದಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಗ್ರಾಮೀಣ ಪರಿಸರದ ಸಮಗ್ರ ಅಭಿವೃದ್ಧಿಗೆ ಕಾರ್ಯನಿರ್ವಹಿಸುವ ಜೊತೆಗೆ ತುಳುನಾಡಿನ ಶ್ರೀಮಂತ ಸಂಸ್ಕೃತಿಗೆ ಶ್ರಮಿಸಲು ಹಾಗೂ “ತುಳುನಾಡನ್ ಕಳರಿ” ಪದ್ಧತಿಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಅವರು ನಿರಂತರ ಚಟುವಟಿಕೆಯಲ್ಲಿ ತೊಡಗಿದ್ದಾರೆ.

1928ರಲ್ಲಿ ಉಡುಪಿಯಲ್ಲಿ ಎಸ್.ಯು. ಪಣಿಯಾಡಿ ನೇತೃತ್ವದಲ್ಲಿ ಸ್ಥಾಪನೆಯಾದ ತುಳುವ ಮಹಾಸಭೆ ಈಗ ಶತಮಾನೋತ್ಸವದ ಸಂಭ್ರಮಕ್ಕೆ ತಯಾರಿ ನಡೆಸುತ್ತಿದೆ. ಈ ಸಂದರ್ಭ ತುಳುನಾಡಿನ ಜನಪದ ಪರಂಪರೆ, ಕಳರಿ ತರಬೇತಿ, ನಶಿಸುತ್ತಿರುವ ದೈವ ಆರಾಧನೆಗಳ ಪುನಶ್ಚೇತನ ಹಾಗೂ ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ ಮುಂತಾದ ಮಹತ್ವದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮಹಾಸಭೆ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಕಡಬ ತಾಲೂಕಿನಲ್ಲಿ ಚಟುವಟಿಕೆಗಳಿಗೆ ಬುನಾದಿ ಹಾಕಲು ಅಶಾ ರೈ ಅವರ ನೇತೃತ್ವ ನಿರ್ಣಾಯಕವಾಗಲಿದೆ.

LEAVE A REPLY

Please enter your comment!
Please enter your name here