ಉನ್ನತ ಶಿಕ್ಷಣದಿಂದ ಉದ್ಯೋಗದವರೆಗೆ ನೆರವು : ವಿವಿಧ ಕಲ್ಯಾಣ ಯೋಜನೆ ಘೋಷಣೆ

0
39

ಬೆಂಗಳೂರು : ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು 2026-27ನೇ ಸಾಲಿನಲ್ಲಿ ವೀರಶೈವ-ಲಿಂಗಾಯತ ಸಮುದಾಯ ಹಾಗೂ ಅದರ ಉಪಜಾತಿಗಳಿಗೆ ಸೇರಿದ ಅರ್ಹ ಫಲಾನುಭವಿಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳಡಿ ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 2026ರ ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ವಿದ್ಯಾರ್ಥಿಗಳು, ನಿರುದ್ಯೋಗಿ ಯುವಜನರು, ಸಣ್ಣ ಮತ್ತು ಅತಿ ಸಣ್ಣ ರೈತರು ಸೇರಿದಂತೆ ವಿವಿಧ ವರ್ಗದ ಅರ್ಹ ಫಲಾನುಭವಿಗಳಿಗೆ ಶಿಕ್ಷಣ, ಸ್ವಯಂ ಉದ್ಯೋಗ, ನೀರಾವರಿ ಹಾಗೂ ಕೌಶಲ್ಯಾಭಿವೃದ್ಧಿಗೆ ನೆರವು ನೀಡುವುದು ಯೋಜನೆಗಳ ಪ್ರಮುಖ ಉದ್ದೇಶವಾಗಿದೆ.

ಬಸವ ಬೆಳಗು ಯೋಜನೆ:
ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ಒದಗಿಸಲಾಗುತ್ತದೆ. ಕುಟುಂಬದ ವಾರ್ಷಿಕ ಆದಾಯ ₹3.50 ಲಕ್ಷದೊಳಗಿರಬೇಕು. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ 28 ವೃತ್ತಿಪರ ಕೋರ್ಸ್‌ಗಳಿಗೆ ಈ ಯೋಜನೆಯಡಿ ಸಾಲ ಸೌಲಭ್ಯ ಲಭ್ಯವಿದೆ. CET/NEET ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಹಿಂದಿನ ಸಾಲಿನಲ್ಲಿ ಸಾಲ ಪಡೆದಿರುವ ವಿದ್ಯಾರ್ಥಿಗಳಿಗೆ ನವೀಕರಣದ ಅವಕಾಶವೂ ಇದೆ.

ವಿದೇಶ ವಿದ್ಯಾಭ್ಯಾಸ ಯೋಜನೆ:
ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಅರ್ಹ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಗರಿಷ್ಠ ₹50 ಲಕ್ಷದವರೆಗೆ ಶೂನ್ಯ ಬಡ್ಡಿದರ ಸಾಲದ ನೆರವು ದೊರೆಯಲಿದೆ. QS World Ranking 1000ರೊಳಗಿನ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟರಲ್, ಪಿಎಚ್.ಡಿ ಮತ್ತು ಮಾಸ್ಟರ್ ಡಿಗ್ರಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಗಂಗಾ ಕಲ್ಯಾಣ ಯೋಜನೆ:
ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯ ಕಲ್ಪಿಸಲು ಸಹಾಯಧನ ಮತ್ತು ಸಾಲದ ನೆರವು ನೀಡಲಾಗುತ್ತದೆ. ಗ್ರಾಮಾಂತರ ಪ್ರದೇಶದ ಫಲಾನುಭವಿಗಳಿಗೆ ₹98,000 ಹಾಗೂ ಪಟ್ಟಣ ಪ್ರದೇಶದವರಿಗೆ ₹1.20 ಲಕ್ಷ ಆದಾಯ ಮಿತಿ ನಿಗದಿಪಡಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕನಿಷ್ಠ ಒಂದು ಎಕರೆ ಹಾಗೂ ಇತರೆ ಜಿಲ್ಲೆಗಳಲ್ಲಿ ಕನಿಷ್ಠ ಎರಡು ಎಕರೆ ಮತ್ತು ಗರಿಷ್ಠ ಐದು ಎಕರೆ ಜಮೀನು ಹೊಂದಿರುವವರು ಅರ್ಹರಾಗಿರುತ್ತಾರೆ.

ಕಾಯಕ ಕಿರಣ ಯೋಜನೆ:
ನಿರುದ್ಯೋಗಿಗಳು ಸ್ವಯಂ ಉದ್ಯೋಗ ಆರಂಭಿಸಲು ಶೇ.4ರ ಬಡ್ಡಿದರದಲ್ಲಿ ಆರ್ಥಿಕ ನೆರವು ಪಡೆಯಬಹುದು. ₹1 ಲಕ್ಷ ವೆಚ್ಚದ ಘಟಕಕ್ಕೆ ₹20,000 ಸಹಾಯಧನ ಮತ್ತು ₹80,000 ಸಾಲ ನೀಡಲಾಗುತ್ತದೆ. ₹2 ಲಕ್ಷ ವೆಚ್ಚದ ಘಟಕಕ್ಕೆ ₹30,000 ಸಹಾಯಧನ ಹಾಗೂ ₹1.70 ಲಕ್ಷ ಸಾಲ ಸೌಲಭ್ಯ ದೊರೆಯಲಿದೆ.

ಸ್ವಾವಲಂಬಿ ಸಾರಥಿ ಯೋಜನೆ:
ನಿರುದ್ಯೋಗಿ ಯುವಜನರು ಸ್ವಯಂ ಉದ್ಯೋಗಕ್ಕಾಗಿ ಹಳದಿ ಬೋರ್ಡ್ ನಾಲ್ಕು ಚಕ್ರದ ವಾಹನ ಖರೀದಿಸಲು ಬ್ಯಾಂಕ್ ಸಾಲದ ಮೇಲೆ ಶೇ.50ರಷ್ಟು ಅಥವಾ ಗರಿಷ್ಠ ₹3 ಲಕ್ಷದವರೆಗೆ ಸಹಾಯಧನ ಪಡೆಯಬಹುದು. ಅರ್ಜಿದಾರರ ವಯಸ್ಸು 21ರಿಂದ 45 ವರ್ಷಗಳೊಳಗಿರಬೇಕು.

ಮುನ್ನಡೆ ಯೋಜನೆ:
ಐಟಿಐ, ಜಿಟಿಟಿಸಿ, ಕೆಜಿಟಿಟಿಐ, ಎಟಿಸಿಡಿಸಿ, ವಿಟಿಯು ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಮುಖಿ ತರಬೇತಿ ನೀಡಲಾಗುತ್ತದೆ. 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಅಥವಾ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷದೊಳಗಿನ ಯುವಜನರು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷದೊಳಗಿರಬೇಕು. ಈ ಯೋಜನೆಗೆ kaushalkar.com ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಕೆಗೆ ಪ್ರಮುಖ ಸೂಚನೆ

ಅರ್ಜಿದಾರರ ಆಧಾರ್ ಸಂಖ್ಯೆ ಮೊಬೈಲ್ ಸಂಖ್ಯೆಗೆ ಜೋಡಣೆಯಾಗಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಸೀಡ್ ಆಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಮೇಲ್ಕಂಡ ಯೋಜನೆಗಳ ಪೈಕಿ ಯಾವುದಾದರೂ ಒಂದು ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ.

ಅರ್ಹರು ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.

2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗದ ಅಭ್ಯರ್ಥಿಗಳು ಅದೇ ಯೋಜನೆಗೆ 2026-27ನೇ ಸಾಲಿನಲ್ಲಿ ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ನಿಗಮ ತಿಳಿಸಿದೆ.

ಯೋಜನೆಗಳ ಅರ್ಹತೆ, ದಾಖಲೆಗಳು ಹಾಗೂ ಅರ್ಜಿ ಸಲ್ಲಿಕೆ ಕುರಿತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್ kvldcl.karnataka.gov.in ಅಥವಾ ಸಹಾಯವಾಣಿ 080-22865522, 9900012351, 9900012352 ಸಂಪರ್ಕಿಸಬಹುದು..