
ಮಂಗಳೂರು : ನಗರದ ಪೊಲೀಸ್ ಆಯುಕ್ತರ ಕಚೇರಿಯ ಲೆಕ್ಕ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ತಮ್ಮ ಪತಿಯ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿ ಪಡೆಯುವ ನೆಪದಲ್ಲಿ ಬಿಲ್‌ಗಳನ್ನು ತಿರುಚಿ ಲಕ್ಷಾಂತರ ರೂಪಾಯಿ ವಂಚನೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತರ ಕಚೇರಿಯ ಲೆಕ್ಕ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕಿ (FDA) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಯಶಸ್ವಿನಿ ಎಸ್.ಟಿ. ಅವರ ವಿರುದ್ಧ ಅಕೌಂಟ್ ಸೂಪರಿಂಟೆಂಡೆಂಟ್ ಎಸ್.ಐ. ವಂಡಾಲ್ಕರ್ ಅವರು ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಯಶಸ್ವಿನಿ ಅವರು ತಮ್ಮ ಪತಿಯ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ಬಿಲ್‌ಗಳನ್ನು ಇಲಾಖೆಯಿಂದ ಮರುಪಾವತಿ ಪಡೆಯಲು ಸಲ್ಲಿಸಿದ್ದರು. ಆದರೆ ಬಿಲ್‌ಗಳಲ್ಲಿದ್ದ ಮೂಲ ಮೊತ್ತವನ್ನು ತಿದ್ದಿ, ವಾಸ್ತವ ವೆಚ್ಚಕ್ಕಿಂತ ಹೆಚ್ಚಿನ ಮೊತ್ತವನ್ನು ನಮೂದಿಸಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.
ಬಿಲ್‌ಗಳಲ್ಲಿ ಭಾರೀ ವ್ಯತ್ಯಾಸ
ಮೊದಲ ವೈದ್ಯಕೀಯ ಬಿಲ್‌ನ ಅಸಲಿ ಮೊತ್ತ ₹15,398 ಆಗಿದ್ದರೆ, ಅದನ್ನು ₹1,95,213 ಎಂದು ತಿದ್ದಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮತ್ತೊಂದು ಬಿಲ್‌ನ ವಾಸ್ತವ ಮೊತ್ತ ₹65,831 ಆಗಿದ್ದು, ಅದನ್ನು ₹1,95,243ಕ್ಕೆ ಬದಲಾಯಿಸಲಾಗಿದೆ ಎನ್ನಲಾಗಿದೆ.
ಎರಡೂ ಬಿಲ್‌ಗಳ ನೈಜ ಮೊತ್ತ ಒಟ್ಟು ₹81,229 ಆಗಿದ್ದರೂ, ಹೆಚ್ಚಿನ ಮೊತ್ತವನ್ನು ನಮೂದಿಸಿ ಮರುಪಾವತಿ ಪಡೆಯಲು ದಾಖಲೆಗಳನ್ನು ತಿರುಚಲಾಗಿದೆ ಎಂಬ ಆರೋಪವಿದೆ.
ಅಧಿಕೃತ ಮೊಹರು, ಸಹಿ ದುರ್ಬಳಕೆ ಆರೋಪ
ಬಿಲ್‌ಗಳ ಮೊತ್ತವನ್ನು ಬದಲಾಯಿಸುವುದರ ಜೊತೆಗೆ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ಬಾರದಂತೆ ಮಂಜೂರಾತಿ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 2025ರ ಜೂನ್ ತಿಂಗಳಿನ ‘Tor Commissioner of Police, Mangaluru’ ಎಂಬ ಅಧಿಕೃತ ಮೊಹರನ್ನು ಬಳಸಿಕೊಂಡು ಸಹಿ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಿಲ್‌ಗಳ ಪರಿಶೀಲನೆಯ ಸಂದರ್ಭದಲ್ಲಿ ವ್ಯತ್ಯಾಸಗಳು ಬೆಳಕಿಗೆ ಬಂದ ಬಳಿಕ ಪ್ರಕರಣ ದಾಖಲಿಸಲಾಗಿದೆ. ನಕಲಿ ದಾಖಲೆ ಸೃಷ್ಟಿ, ಅಧಿಕೃತ ಮೊಹರು ಹಾಗೂ ಸಹಿ ದುರ್ಬಳಕೆ ಮತ್ತು ಸರ್ಕಾರಕ್ಕೆ ವಂಚಿಸಲು ಯತ್ನಿಸಿದ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆಯ ಬಳಿಕ ಆರೋಪಗಳ ಕುರಿತ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
