ಉಡುಪಿ: ಮಣಿಪಾಲದ ಶಾಂತಿನಗರದಲ್ಲಿ ಸುದರ್ಶನ ಕಾಂಪ್ಲೆಕ್ಸ್ನ ಬಾಡಿಗೆ ಕೋಣೆಯೊಂದರಲ್ಲಿ ವಾಸವಾಗಿದ್ದ ಯುವತಿ ಕೊಲೆಯತ್ನ ಪ್ರಕರಣ ಭೇದಿಸಿರುವ ಪೊಲೀಸರು ನೆರೆಮನೆಯ ಮಹಿಳೆಯನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದ ನಿವಾಸಿ ಸುಷ್ಮಾ ಅಣ್ಣಪ್ಪ ನಾಯ್ಕ್ (31) ಬಂಧಿತ ಆರೋಪಿತೆ. ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಪ್ರೆಸ್ನಲ್ಲಿ ಬೈಂಡಿಂಗ್ ಕೆಲಸ ಮಾಡುತ್ತಿದ್ದ ಯೋಗಿತಾ ಹಲ್ಲೆಗೊಳಗಾದ ದುರ್ದೈವಿ.
ಪ್ರಕರಣ ವಿವರ
ಮೇ 12ರಂದು ರಾತ್ರಿ ಯೋಗಿತಾ ಕೋಣೆಯಲ್ಲಿ ಒಬ್ಬಳೇ ಇದ್ದದ್ದನ್ನು ಗಮನಿಸಿದ ಪಕ್ಕದ ರೂಮಿನ ಸುಷ್ಮಾ ಆಕೆಯ ಕೋಣೆಗೆ ಬಂದು ಜೊತೆಯಲ್ಲಿ ಮಲಗಿದ್ದಾಳೆ. ಬೆಳಗಿನ ಜಾವ ಸುಮಾರು 4:30ರ ವೇಳೆಗೆ ಯೋಗಿತಾ ಗಾಢ ನಿದ್ರೆಯಲ್ಲಿದ್ದಾಗ ಮೊದಲೇ ತಂದಿಟ್ಟುಕೊಂಡಿದ್ದ ಕಾಂಕ್ರೀಟ್ ಹಾಲೋ ಬ್ಲಾಕ್ ಕಲ್ಲನ್ನು ಆಕೆಯ ತಲೆಯ ಮೇಲೆ ಪದೇ ಪದೇ ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದು, ಬಳಿಕ ಆಕೆಯ ಕುತ್ತಿಗೆಯಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಸರ ಹಾಗೂ ಕಿವಿಯ ಬೆಂಡೋಲೆಯನ್ನು ದೋಚಿ, ತನ್ನ ಕೋಣೆಗೆ ಮರಳಿದ್ದಳು. ಮರುದಿನ ಬೆಳಿಗ್ಗೆ 7:15 ರ ಸುಮಾರಿಗೆ ಯೋಗಿತಾಳ ರೂಮ್ಮೇಟ್ಗಳು ಕೆಲಸ ಮುಗಿಸಿ ವಾಪಸಾದಾಗ ಬಾಗಿಲು ಅರೆತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಯೋಗಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣ ಆಕೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುರಿತು ಮೇಘಾ ಗೌಡ ನೀಡಿದ ದೂರಿನನ್ವಯ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಪ್ಪೊಪ್ಪಿಕೊಂಡ ಆರೋಪಿ
ಕಳೆದ 3 ವರ್ಷಗಳಿಂದ ಮನೆಗೆ ಹಣ ಕಳುಹಿಸಲು ಸಾಧ್ಯವಾಗಿರಲಿಲ್ಲ. ಮನೆಯವರು ಹಣಕ್ಕಾಗಿ ಪೀಡಿಸುತ್ತಿದ್ದರು ಹಾಗೂ ಕೆಲಸ ಬಿಟ್ಟು ಊರಿಗೆ ಬರುವಂತೆ ಒತ್ತಾಯಿಸುತ್ತಿದ್ದರು. ಹೇಗಾದರೂ ಮಾಡಿ ಹಣ ಹೊಂದಿಸುವ ಅನಿವಾರ್ಯತೆಯಿಂದ ಈ ಕೃತ್ಯ ಎಸಗಿದೆ ಎಂದು ಬಂಧಿತ ಸುಷ್ಮಾ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. ಬಂಧಿತಳಿಂದ ದೋಚಲಾಗಿದ್ದ ಚಿನ್ನದ ಸರ ಹಾಗೂ ಬೆಂಡೋಲೆಗಳನ್ನು ಪೊಲೀಸರು ಸ್ವಾಧಿನಪಡಿಸಿಕೊಂಡಿದ್ದಾರೆ.

