ಚಿತ್ರದುರ್ಗ: ಪೊಲೀಸರ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕೋಟೆನಾಡು ಚಿತ್ರದುರ್ಗದಲ್ಲಿ ಆಟೋ ಚಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆಟೋ ಚಲಾಯಿಸುತ್ತಿದ್ದ ಚಾಲಕ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಆತನ ಕಾಲರ್ ಹಿಡಿದು, ತಳ್ಳಿ ಅವಮಾನ ಮಾಡಿದರೆಂಬ ಕಾರಣಕ್ಕೆ ಮನನೊಂದ ಆಟೋ ಚಾಲಕ ಗಾಂಧಿ ವೃತ್ತದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಆತನ್ನು ರಕ್ಷಿಸಿದ ಸ್ಥಳೀಯರು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಮಾಳಪ್ಪನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ(35) ಸುಮಾರು ವರ್ಷಗಳಿಂದ ಕಾರು, ಆಟೋ ಚಾಲನೆ ಮಾಡಿಕೊಂಡು ಬದುಕುಕಟ್ಟಿಕೊಂಡಿದ್ದರು. ನ.22ರ ಸಂಜೆ ತಿಪ್ಪೇಸ್ವಾಮಿ ಗಾಂಧಿ ವೃತ್ತ ಬಳಿ ಆಟೋ ಚಾಲನೆ ಮಾಡುವ ವೇಳೆ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದರು. ಕುಡಿದು ಆಟೋ ಚಾಲನೆ ಮಾಡುತ್ತಿರುವುದಾಗಿ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಚಾಲಕನನ್ನು ತಡೆಹಿಡಿದಿದ್ದರು. ತಿಪ್ಪೇಸ್ವಾಮಿ ಯುನಿಫಾರ್ಮ್ ಹಾಕದಿರುವುದನ್ನು ಪ್ರಶ್ನಿಸಿದ್ದರಲ್ಲದೇ ನಿಯಮ ಮೀರಿ ಆಟೋ ಚಾಲಾಯಿಸಿದ್ದಾಗಿಯೂ ಆರೋಪಿಸಿದ್ದರು.
ಇದೇ ವೇಳೆ ಆಟೋ ಚಾಲಕ ತಿಪ್ಪೇಸ್ವಾಮಿ ಸಹ ಮೊಬೈಲ್ ಕ್ಯಾಮೆರಾ ಆನ್ ಮಾಡಿಕೊಂಡು ಮಂಜುನಾಥ್ ಮತ್ತು ದೇವರಾಜ್ ಎಂಬ ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದ. ಪೊಲೀಸರು ಕಾಲರ್ ಹಿಡಿದು ತಳ್ಳಿಕೊಂಡು ಹೋಗಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಅವರ ಈ ವರ್ತನೆಯನ್ನು ಚಾಲಕ ವಿರೋಧಿಸಿದ್ದ. ಅವರೊಂದಿಗಿನ ವಾಗ್ವಾದದಲ್ಲಿ ತಾನು ಕುಡಿದಿರುವುದಾಗಿಯೂ ಒಪ್ಪಿಕೊಂಡಿದ್ದ. ಆದರೂ ಪೊಲೀಸರು ವಾಗ್ವಾದ ಮುಂದುವರಿಸಿದ್ದರು. ಇದಲ್ಲದೇ ಪೊಲೀಸರು, ಆತ ಕುಡಿತ ಮತ್ತಿನಲ್ಲಿ ಇತರರ ಮೇಲೆ ಗಾಡಿ ಹಾಯಿಸುವಂತೆ ಹೋಗಿದ್ದಾನೆಂಬ ಅಪವಾದವನ್ನೂ ಮಾಡಿದ್ದರು. ಇದೆಲ್ಲದರಿಂದ ಮನ ನೊಂದ ತಿಪ್ಪೇಸ್ವಾಮಿ ಗಾಂಧಿವೃತ್ತದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪೊಲೀಸರ ಕಿರುಕುಳದಿಂದ ಬೇಸತ್ತು ಪಾಠ ಕಲಿಸಲು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಗಾಯಾಳು ತಿಪ್ಪೇಸ್ವಾಮಿ ಹೇಳಿದ್ದಾರೆ.
ಇನ್ನು ಈ ಘಟನೆಯ ಸುದ್ದಿ ಹಬ್ಬುತ್ತಿದ್ದಂತೆಯೇ ಆಸ್ಪತ್ರೆ ಬಳಿ ಜನ ಜಮಾಯಿಸಿ, ಪೊಲೀಸರ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಆಟೋ ಚಾಲಕ ತಿಪ್ಪೇಸ್ವಾಮಿ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಆತ ಅನೇಕ ಸಲ ಪೊಲೀಸರು ಹಣ ಕೇಳಿದಾಗ ಕೊಟ್ಟು ಬಂದಿರುವುದು ನಾವೇ ನೋಡಿದ್ದೇವೆ. ಈ ಬಾರಿ ಹಣ ಇಲ್ಲದಿರುವ ಕಾರಣ ಪೊಲೀಸರಿಗೆ ಕೊಟ್ಟಿರಲಿಕ್ಕಿಲ್ಲ ಎಂದು ತಿಪ್ಪೇಸ್ವಾಮಿ ಪತ್ನಿ ಲಕ್ಷ್ಮೀ ಅಳಲು ತೋಡಿಕೊಂಡಿದ್ದಾರೆ.
ಚಾಲಕನ ಆತ್ಮಹತ್ಯೆ ಯತ್ನಕ್ಕೆ ಪೊಲೀಸರೇ ಕಾರಣವೆಂದು ಆರೋಪಿಸಿ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಆಟೋ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ವೃತ್ತದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ರಂಜಿತ್ ಕುಮಾರ್, ನಿನ್ನೆ ರಾತ್ರಿ 8:30ಕ್ಕೆ ಆಟೋ ಚಾಲಕನನ್ನು ಪೊಲೀಸರು ತಡೆದಿದ್ದಾರೆ.ಡ್ರಂಕ್ ಅಂಡ್ ಡ್ರೈವ್ ಬಗ್ಗೆ ಪ್ರಶ್ನಿಸಿದಾಗ ವಾಗ್ವಾದ ನಡೆದಿದೆ. PSI ಬಂದು ಪರಿಶೀಲಿಸುತ್ತಾರೆ ಎಂದು ಸೂಚಿಸಿದರೂ ಚಾಲಕ ತಿಪ್ಪೇಸ್ವಾಮಿ ಆಟೋ ಬಿಟ್ಟು ಹೋಗಿದ್ದಾರೆ. ನಂತರ ರಾತ್ರಿ 9:50ಕ್ಕೆ ತಿಪ್ಪೇಸ್ವಾಮಿ ಗಾಂಧಿ ವೃತ್ತಕ್ಕೆ ಬಂದು, ಸುತ್ತಲೂ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾರೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆದರಿಸಲು ಮುಂದಾದಾಗ ಆಕಸ್ಮಿಕ ಬೆಂಕಿ ತಗುಲಿದೆ.
ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ದೌರ್ಜನ್ಯ ಎಂದು ಬಿಂಬುಸಲಾಗುತ್ತಿದೆ.ಇದು ಪೊಲೀಸ್ ದೌರ್ಜನ್ಯ ಅಲ್ಲ, ಸಾರ್ವಜನಿಕರ ಉದಾಸೀನತೆ. ತಿಪ್ಪೇಸ್ವಾಮಿಯನ್ನು ಗಮನಿಸಿ ಜನ ಈ ಘಟನೆ ತಡೆಯಬಹುದಿತ್ತು. ಬೆಂಕಿ ಹಚ್ಚಿಕೊಂಡಾಗಲೂ ಜನರಿಂದ ರಕ್ಷಣೆ ತಡವಾಗಿದೆ. ತಿಪ್ಪೇಸ್ವಾಮಿ ದೇಹ ಶೇ.50ರಷ್ಟು ಸುಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಿಂದ ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದಿದ್ದಾರೆ.

