ಬಂಟ್ವಾಳ : ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆ, ವಿದ್ಯಾಗಿರಿ ಬಂಟ್ವಾಳದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ (ನಮೂನೆ–6 ಭರ್ತಿ) ಜಾಗೃತಿ ಹಾಗೂ ನೋಂದಣಿ ಮಾಹಿತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
18 ವರ್ಷ ಪೂರ್ಣಗೊಂಡ ಹೊಸ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಗೌತಮಿ ಕೆ., ನಮೂನೆ–6 ಅನ್ನು ಹೇಗೆ ಭರ್ತಿ ಮಾಡಬೇಕು, ಅಗತ್ಯ ದಾಖಲೆಗಳು ಯಾವುವು ಹಾಗೂ ಮತದಾರರ ಗುರುತಿನ ಚೀಟಿಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ನಮೂನೆ–6 ವಿತರಿಸಿ ಭರ್ತಿ ಮಾಡಿಸಲಾಯಿತು.
ಕಾರ್ಯಕ್ರಮವು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಚೈತ್ರ ಶೆಟ್ಟಿ ಹಾಗೂ ಪೂರ್ವಪ್ರಾಥಮಿಕ ವಿಭಾಗದ ಸಂಯೋಜಕಿ ವೀಣಾ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಸಂದೇಹಗಳಿಗೆ ಪರಿಹಾರ ಪಡೆದುಕೊಂಡರು. ಮತದಾನದ ಹಕ್ಕಿನ ಮಹತ್ವ ಹಾಗೂ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರದ ಕುರಿತು ಜಾಗೃತಿ ಮೂಡಿಸಿದ ಈ ಕಾರ್ಯಕ್ರಮ ಯಶಸ್ವಿಯಾಗಿ ಸಮಾಪ್ತಿಯಾಯಿತು.
ಕಾರ್ಯಕ್ರಮದಲ್ಲಿ ಕುಮಾರಿ ಖೈರುನ್ನೀಸಾ ರಿಷ್ಮ ಸ್ವಾಗತಿಸಿದರು. ಕುಮಾರಿ ಶಿವಾನಿ ವಂದಿಸಿದರು. ಕುಮಾರಿ ಆಯಿಷಾ ಫಲೀಲಾ ಕಾರ್ಯಕ್ರಮವನ್ನು ನಿರೂಪಿಸಿದರು.

