ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮದ ಅಂಗವಾಗಿ ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಲ್ಲಿ ನಾಗರಿಕ ಸೇವೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ದೊರೆಯುವ ವೃತ್ತಿ ಅವಕಾಶಗಳ ಕುರಿತು ಮಾಹಿತಿ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (KMF) ನಿರ್ದೇಶಕರಾದ ಕೆ.ಪಿ. ಸುಚರಿತ ಶೆಟ್ಟಿ, ಶ್ರೀ ಸತ್ಯವಾಣಿ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳ ಸಮೂಹದ ಪ್ರಾಂಶುಪಾಲರು ಹಾಗೂ ನಿರ್ದೇಶಕರಾದ ಡಾ. ಎನ್.ವಿ. ದೇವಿ ಪ್ರಸಾದ್ ಶೆಟ್ಟಿ, ವಿಷನ್ ಐಎಎಸ್‌ನ ಹಿರಿಯ ಅಧ್ಯಾಪಕರಾದ ಕಾಸಂ ಸಿ. ಸುಹಾಸ್ ಹಾಗೂ ಸ್ಪರ್ಧಾ ಭಾರ್ಗವ ಐಎಎಸ್ ಮತ್ತು ಕೆಎಎಸ್ ಅಕಾಡೆಮಿಯ ಆಡಳಿತಾಧಿಕಾರಿ ರಾಹುಲ್ ಉಪಸ್ಥಿತರಿದ್ದರು.
ಸ್ಪರ್ಧಾ ಭಾರ್ಗವ ಐಎಎಸ್ ಮತ್ತು ಕೆಎಎಸ್ ಅಕಾಡೆಮಿಯ ಸಂಪನ್ಮೂಲ ವ್ಯಕ್ತಿಗಳು ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಪರೀಕ್ಷೆಗಳ ತಯಾರಿ ವಿಧಾನ, ಅಧ್ಯಯನದ ಯೋಜನೆ, ನಾಗರಿಕ ಸೇವೆಗಳಲ್ಲಿರುವ ವೃತ್ತಿ ಅವಕಾಶಗಳು ಹಾಗೂ ನಿರಂತರ ಪರಿಶ್ರಮ ಮತ್ತು ಸಮರ್ಪಣೆಯ ಮಹತ್ವವನ್ನು ವಿವರಿಸಿದರು.
ಹಿರಿಯ ಅಧ್ಯಾಪಕ ಕಾಸಂ ಸಿ. ಸುಹಾಸ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸೂಕ್ತ ಮಾರ್ಗದರ್ಶನ, ನಿರಂತರ ಅಭ್ಯಾಸ ಹಾಗೂ ಆತ್ಮವಿಶ್ವಾಸ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಯೋಜಿತ ರೀತಿಯಲ್ಲಿ ಸಿದ್ಧತೆ ಆರಂಭಿಸಬೇಕು ಎಂದು ಕರೆ ನೀಡಿದರು. ಅಲ್ಲದೆ, ಸ್ಪರ್ಧಾ ಭಾರ್ಗವ ಐಎಎಸ್ ಮತ್ತು ಕೆಎಎಸ್ ಅಕಾಡೆಮಿ ನೀಡುತ್ತಿರುವ ತರಬೇತಿ ಹಾಗೂ ಮಾರ್ಗದರ್ಶನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕಿ ದೀಕ್ಷಾ ಉಪಸ್ಥಿತರಿದ್ದರು. ಉಪನ್ಯಾಸಕಿ ಆಶ್ರಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಗರಿಕ ಸೇವೆಗಳ ಬಗ್ಗೆ ಆಸಕ್ತಿ ಮೂಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಡಲು ಪ್ರೇರಣೆ ನೀಡಿತು.

