ಸಂಘರ್ಷದಿಂದ ಸಾಧನೆಯ ಶಿಖರ ಏರಿದ ಬಾಬಾ ಸಾಹೇಬ್ ಅಂಬೇಡ್ಕರ್ : ಯಶ್ ಪಾಲ್ ಸುವರ್ಣ

0
7

ಉಡುಪಿ : ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ವಿಸ್ತೃತ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ ಭೀಮ ರಾವ್ ಅಂಬೇಡ್ಕರ್ ಅವರ ಜೀವನವೇ ನಮಗೆ ಆದರ್ಶ. ಸಂಘರ್ಷಗಳ ಮಧ್ಯೆಯೂ ಸಾಧನೆ ಮಾಡಿ ಜಗತ್ತಿಗೆ ಸಮಾನತೆಯ ದಾರಿ ದೀಪ ತೋರಿದ ಅವರ ಜೀವನದ ಮೌಲ್ಯಗಳನ್ನು ನಾವು ಕೂಡ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಕರೆ ನೀಡಿದರು.

ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ಜಾತಿ, ಪ.ಪಂಗಡದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ದೇಶದಲ್ಲಿ ನಾವೆಲ್ಲರೂ ಅನ್ಯೋನ್ಯತೆಯಿಂದ ಬಾಳುತ್ತಿದ್ದರೆ ಅದಕ್ಕೆ ಬಾಬಾ ಸಾಹೇಬರ ಸಂವಿಧಾನ ಕಾರಣ. ಅಂದು ಅವರು ಸಮಾನತೆಗಾಗಿ ಹೋರಾಟ ನಡೆಸಿ ಸಮ ಸಮಾಜದ ನಿರ್ಮಾಣ ಮಾಡಿದ್ದರಿಂದ ಇದು ಸಾಧ್ಯವಾಯಿತು. ಸಮಾಜದ ಸಾಮರಸ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯ. ಆ ಮೂಲಕ ನಾವು ಮಹಾನ್ ಚೇತನಗಳಿಗೆ ಗೌರವ ಸಲ್ಲಿಸದಂತೆ ಆಗುತ್ತದೆ ಎಂದರು.

ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ ಎ ಗಫೂರ್ ಮಾತನಾಡಿ, ಅಂಬೇಡ್ಕರ್ ಅವರು ಒಂದು ಶಕ್ತಿ. ಅವರು ಯಾರಿಂದಲೂ ಪಡೆಯ ಲಾಗದ ಮಾಣಿಕ್ಯ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೊತೆ ಸರಿ ಸಮನಾಗಿ ದೇಶದ ಏಳಿಗೆಗಾಗಿ ದುಡಿದರು. ದೇಶದ ಕಾನೂನು ಸಚಿವರಾಗಿ ಅವರು ರೂಪಿಸಿದ ಕಾನೂನುಗಳು ನಮಗೆ ಇಂದಿಗೂ ಬಲ ತುಂಬುತ್ತಿದೆ. ಅವರು ರೂಪಿಸಿದ ಪವಿತ್ರ ಸಂವಿಧಾನವನ್ನು ಬಲಿಷ್ಠಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅವರ ಆಶಯದಂತೆ ಬಾಳಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆನಡೆಸೋಣ ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಬಾಬಾ ಸಾಹೇಬರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕಿದವರು. ಹೆಣ್ಣು ಮಕ್ಕಳು ಇಂದು ಇಷ್ಟೆಲ್ಲಾ ಸಾಧನೆ ಮಾಡಲು ಅವಕಾಶ ಮಾಡಿ ಕೊಟ್ಟವರು. ತಮ್ಮ ಆಳವಾದ ಅಧ್ಯಯನದಿಂದ ಸಂವಿಧಾನದ ರಚನೆ ಮಾಡಿದವರು. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಅವರ ಮೂಲ ಮಂತ್ರವಾಗಿತ್ತು. ಕಷ್ಟಗಳನ್ನು ಮೆಟ್ಟಿ ನಿಂತು ಸಾಧಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳೋಣ ಎಂದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ ಉಪನ್ಯಾಸ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಡಾ. ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬುದ್ಧ ವಂದನೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಚರ್ಮ ಕುಶಲ ಕರ್ಮಿ ಪಾಂಚಾಲಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾರಾಯಣ ಸ್ವಾಮಿ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ಕಾಪು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಸವರಾಜ ವಂದಿಸಿದರು.

LEAVE A REPLY

Please enter your comment!
Please enter your name here