ಉಡುಪಿ : ಪ್ರಸಿದ್ಧ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಇತ್ತೀಚೆಗೆ ಅತ್ಯಂತ ಅಪರೂಪದ ಹಾಗೂ ನಂಬಲಾಗದ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಮೀನುಗಳನ್ನು ನೀರಿನಿಂದ ಹೊರತೆಗೆದ ಕೆಲವೇ ಕ್ಷಣಗಳಲ್ಲಿ ಅವು ಸಾಯುತ್ತವೆ. ಆದರೆ ಇಲ್ಲಿ ಮೀನನ್ನು ಮಾರಾಟಕ್ಕಾಗಿ ಕತ್ತರಿಸಿ ತುಂಡು ಮಾಡಿದ ನಂತರವೂ ಅದು ಜೀವಂತವಾಗಿ ಒದ್ದಾಡುತ್ತಿರುವುದು ಕಂಡುಬಂದಿದೆ. ಮೀನುಗಾರಿಕಾ ಚಟುವಟಿಕೆಗಳಿಂದ ಸದಾ ಗಿಜಿಗುಟ್ಟುವ ಬಂದರಿನಲ್ಲಿ ಈ ದೃಶ್ಯವನ್ನು ಕಂಡ ಮೀನು ಮಾರಾಟಗಾರರು ಮತ್ತು ಸಾರ್ವಜನಿಕರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಘಟನೆಯ ವಿವರದ ಪ್ರಕಾರ, ಗ್ರಾಹಕರೊಬ್ಬರು ಮೀನು ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರ ಬಳಿ ಬಂಗುಡೆ ಮೀನನ್ನು ಖರೀದಿಸಿದ್ದರು. ಗ್ರಾಹಕರ ಕೋರಿಕೆಯಂತೆ ಮೀನು ಮಾರಾಟದ ಮಹಿಳೆ ಆ ಮೀನನ್ನು ಚಾಕುವಿನಿಂದ ಕತ್ತರಿಸಿ ಸ್ವಚ್ಛಗೊಳಿಸಿ ಪಕ್ಕದಲ್ಲಿದ್ದ ನೀರಿನ ಟಬ್‌ಗೆ ಹಾಕಿದ್ದು , ಕತ್ತರಿಸಲ್ಪಟ್ಟ ಮೀನಿನ ತುಂಡುಗಳು ಟಬ್‌ನಲ್ಲಿ ಜೀವಂತ ಮೀನಿನಂತೆ ಬಲವಾಗಿ ಒದ್ದಾಡತೊಡಗಿವೆ. ಪ್ರಾಣ ಹೋದ ನಂತರವೂ ಮೀನಿನ ದೇಹದ ಭಾಗಗಳು ಈ ರೀತಿ ಚಲಿಸುತ್ತಿರುವುದನ್ನು ಕಂಡು ಅಲ್ಲಿದ್ದ ಮಹಿಳೆಯರು ಗಾಬರಿಗೊಂಡಿದ್ದಾರೆ.
ಈ ವಿಲಕ್ಷಣ ಘಟನೆಯನ್ನು ಅಲ್ಲಿಯೇ ಇದ್ದವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಜ್ಞಾನದ ಪ್ರಕಾರ, ಮೀನುಗಳ ನರಮಂಡಲವು ಸಾವಿನ ನಂತರವೂ ಕೆಲಕಾಲ ಪ್ರತಿಕ್ರಿಯಿಸುವುದರಿಂದ ಹೀಗೆ ಸಂಭವಿಸಬಹುದು ಎನ್ನಲಾಗುತ್ತದೆಯಾದರೂ, ಸಾಮಾನ್ಯ ಜನರ ಪಾಲಿಗೆ ಇದು ಯಾವುದೋ ಪವಾಡದಂತೆ ಕಂಡುಬಂದಿದೆ. ಮಲ್ಪೆ ಬಂದರಿನ ಇತಿಹಾಸದಲ್ಲಿ ಇಂತಹ ಘಟನೆ ತೀರಾ ಅಪರೂಪವೆಂದು ಸ್ಥಳೀಯರು ಚರ್ಚಿಸಿಕೊಳ್ಳುತ್ತಿದ್ದಾರೆ.

