ಬಸ್ರೂರು : ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವೈಭವದ ಕೇಂದ್ರಬಿಂದು – ಬಸ್ರೂರಿನ ಶ್ರೀ ತುಳುವೇಶ್ವರ ದೇವರು, ಇಂದಿಗೂ ಲಕ್ಷಾಂತರ ಭಕ್ತರ ಭರವಸೆಯ ದೇವರು. ಇತ್ತೀಚೆಗೆ ದೈವಜ್ಞರ ಮಾರ್ಗದರ್ಶನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ದೇವರು ತಮ್ಮ ಹಳೆಯ ವೈಭವವನ್ನು ಮರುಸ್ಥಾಪಿಸಲು ಸನ್ನಿಧಾನ ವಿಸ್ತರಣೆ ಅಗತ್ಯವಿದೆ ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.
ಪ್ರಸ್ತುತ ದೇವರಿಗೆ ಕೇವಲ ಎರಡು ಸೆಂಟು ಪ್ರದೇಶ ಮಾತ್ರವಿದ್ದು, ದೇವರ ಸನ್ನಿಧಾನದ ಪಕ್ಕದಲ್ಲಿರುವ ಅರ್ಚಕ ಕುಟುಂಬವನ್ನು ಸ್ಥಳಾಂತರಿಸಿ ಹೊಸ ಮನೆ ನಿರ್ಮಿಸಿಕೊಡಬೇಕಾದ ಅನಿವಾರ್ಯತೆ ಇದೆ. ಜೊತೆಗೆ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಯಾರಿಗೂ ನೋವಾಗದಂತೆ ದಾನ ರೂಪದಲ್ಲಿ ಅಥವಾ ಖರೀದಿಯ ಮೂಲಕ ಪಡೆದು, ದೇವರ ಆಶಯದಂತೆ ಈ ಸಂಪೂರ್ಣ ಪ್ರದೇಶವನ್ನು ದೇವರ ಹೆಸರಿನಲ್ಲಿಯೇ ಪವಿತ್ರ ದೇವಭೂಮಿಯನ್ನಾಗಿ ರೂಪಿಸಬೇಕಾಗಿದೆ.
ಶ್ರೀ ತುಳುವೇಶ್ವರ ದೇವಾಲಯದ ಜೀರ್ಣೋದ್ದಾರ ಸಮಿತಿಯ ಆಶಯದಂತೆ, ಪ್ರತಿಯೊಬ್ಬ ಭಕ್ತರೂ ದೇವ ಭೂಮಿ ಖರೀದಿಗಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಒಂದು ಚದರ ಅಡಿಗೆ ₹1000/-ರೂಪಾಯಿಯಂತೆ ಅವರವರಿಗೆ ಸಾಧ್ಯ ಇರುವಷ್ಟು ಚದರ ಅಡಿಗೆ ದೇಣಿಗೆ ನೀಡಿ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
ತಮ್ಮ ಭೂಮಿಯನ್ನು ದೇವರ ಹೆಸರಿನಲ್ಲಿ ದಾನವಾಗಿ ನೀಡಿದರೆ ಅದು ಅತ್ಯಂತ ಪುಣ್ಯಕರ ಕಾರ್ಯ. ಹಾಗೆಯೇ ಹಣದ ರೂಪದಲ್ಲಿ ಭೂಮಿ ಖರೀದಿಗೆ ಸಹಾಯ ಮಾಡಿದರೂ ಅದು ತುಳುನಾಡಿನ ದೈವ ದೇವರ ಋಣ ಸಂದಾಯದ ಪವಿತ್ರ ಅವಕಾಶ ಎಂದು ನಂಬಲಾಗಿದೆ. ತುಳುನಾಡಿನ ಗಾಳಿ, ನೀರು, ಅನ್ನ ಸೇವಿಸಿದ ಪ್ರತಿಯೊಬ್ಬರಿಗೂ ಈ ದೇವಾಲಯದ ಪುನರ್ ವೈಭವೀಕರಣದಲ್ಲಿ ಪಾಲ್ಗೊಳ್ಳುವುದು ದೈವ ದೇವರ ಸೇವೆ ಹಾಗೂ ಕೃತಜ್ಞತೆಯ ಕಾರ್ಯ.
ಶ್ರೀ ತುಳುವೇಶ್ವರ, ಶ್ರೀ ತುಳುವೇಶ್ವರಿ, ವರಾಹ ಪಂಜುರ್ಲಿ ಹಾಗೂ ಪರಿವಾರ ದೈವಗಳ ಆಶೀರ್ವಾದದಿಂದ, ಈ ದೇವಾಲಯವು ಮತ್ತೆ ತನ್ನ ಹಳೆಯ ವೈಭವದೊಂದಿಗೆ ಉದಯಿಸಲಿದೆ.
ಭಕ್ತರಾದ ತಾವೆಲ್ಲರೂ ತನು-ಮನ-ಧನಗಳಿಂದ ಸಹಕರಿಸಿ, ಈ ಪವಿತ್ರ ಜೀರ್ಣೋದ್ಧಾರ ಕಾರ್ಯದಲ್ಲಿ ನೆರವಾಗಬೇಕೆಂದು ಶ್ರೀ ಕ್ಷೇತ್ರ ತುಳುವೇಶ್ವರ ದೇವಸ್ಥಾನ, ಜೀರ್ಣೋದ್ಧಾರ ಸಮಿತಿ ಬಸೂರು. ತುಳುವರ್ಲ್ಡ್ ಫೌಂಡೇಶನ್ ಕಟೀಲ್, ತುಳುವ ಮಹಾಸಭೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

