ಹೂಡಿಕೆ ಆಮಿಷ, ಡಿಜಿಟಲ್ ಅರೆಸ್ಟ್‌ ಬಗ್ಗೆ ಎಚ್ಚರಿಕೆಯಿಂದಿರಿ : ಪೊಲೀಸ್ ಕಾನ್‌ಸ್ಟೆಬಲ್ ಪವನ್ ಕುಮಾರ್ ಎಂ.

0
12

ಉಡುಪಿ : ನಕಲಿ ಹೂಡಿಕೆ ಯೋಜನೆಗಳು, ಸಾಲದ ಆಮಿಷಗಳು, ನಕಲಿ ಉದ್ಯೋಗ ವೆಬ್‌ಸೈಟ್‌ಗಳು ಹಾಗೂ ಡಿಜಿಟಲ್ ಅರೆಸ್ಟ್ ಬೆದರಿಕೆಗಳ ಮೂಲಕ ಸೈಬರ್ ಅಪರಾಧಿಗಳು ಜನರನ್ನು ವಂಚಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಪವನ್ ಕುಮಾರ್ ಎಂ. ಎಚ್ಚರಿಸಿದರು.

ಅವರು ಬುಧವಾರ ಉಡುಪಿಯ ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ ಆಯೋಜಿಸಿದ್ದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಚ್ಚಿನ ಲಾಭದ ಭರವಸೆ ನೀಡುವ ಹೂಡಿಕೆ ಯೋಜನೆಗಳು, ಸುಲಭ ಸಾಲ ಹಾಗೂ ಆಕರ್ಷಕ ವೇತನದ ಉದ್ಯೋಗದ ಆಮಿಷವೊಡ್ಡಿ ವಂಚಕರು ಜನರ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಪಡೆದು ಹಣ ಲಪಟಾಯಿಸುತ್ತಾರೆ. ಪರಿಶೀಲಿಸದ ವೆಬ್‌ಸೈಟ್‌ಗಳಲ್ಲಿ ರೆಸ್ಯೂಮ್ ಅಪ್‌ಲೋಡ್ ಮಾಡುವುದು ಹಾಗೂ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ದೂರವಿರಬೇಕು ಎಂದು ಅವರು ಸಲಹೆ ನೀಡಿದರು.

ಭಯ ಹುಟ್ಟಿಸಿ ಹಣ ವಸೂಲಿ

ಡಿಜಿಟಲ್ ಅರೆಸ್ಟ್ ವಂಚನೆಯ ಬಗ್ಗೆ ವಿವರಿಸಿದ ಅವರು, ವಂಚಕರು ಪೊಲೀಸ್ ಅಧಿಕಾರಿಗಳು ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ ದೂರವಾಣಿ ಕರೆ ಮತ್ತು ವಿಡಿಯೊ ಕಾನ್ಫರೆನ್ಸ್ ಮೂಲಕ ಸಂಪರ್ಕಿಸುತ್ತಾರೆ. ನಕಲಿ ಕ್ರಿಮಿನಲ್ ಪ್ರಕರಣಗಳ ಬೆದರಿಕೆ ಹಾಕಿ ಹಣ ವರ್ಗಾಯಿಸುವಂತೆ ಒತ್ತಾಯಿಸುತ್ತಾರೆ ಎಂದು ತಿಳಿಸಿದರು.

ಸೆಕ್ಸ್‌ಟಾರ್ಷನ್, ನಕಲಿ ಸಾಮಾಜಿಕ ಜಾಲತಾಣ ಖಾತೆಗಳು, ಸ್ನ್ಯಾಪ್‌ಚಾಟ್‌ನ ದುರ್ಬಳಕೆ ಹಾಗೂ ವಿಡಿಯೊ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣಗಳ ಬಗ್ಗೆಯೂ ಅವರು ಎಚ್ಚರಿಕೆ ನೀಡಿದರು.

ವೈವಾಹಿಕ ಸಂಬಂಧದ ಹೆಸರಿನಲ್ಲಿ ನಡೆಯುವ ವಂಚನೆಯೂ ಆತಂಕಕಾರಿ ಬೆಳವಣಿಗೆಯಾಗಿದೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವರ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬನಿಂದ ಉಡುಪಿಯ ಮಹಿಳೆಯೊಬ್ಬರು ವಂಚನೆಗೊಳಗಾಗಿ ₹25 ಲಕ್ಷ ಕಳೆದುಕೊಂಡ ಪ್ರಕರಣವನ್ನು ಅವರು ಉಲ್ಲೇಖಿಸಿದರು.

ಕೊರಿಯರ್ ವಂಚನೆ, ಇ-ಸಿಮ್ ವಂಚನೆ, ನಕಲಿ ಗುರುತಿನ ದಾಖಲೆಗಳು, ಸಾಲದ ಅರ್ಜಿಗಳು ಹಾಗೂ ಭಯೋತ್ಪಾದಕ ಜಾಲಗಳೊಂದಿಗಿನ ಸಂಭಾವ್ಯ ಸಂಪರ್ಕ ಸೇರಿದಂತೆ ಅಪರಾಧ ಕೃತ್ಯಗಳಿಗೆ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆಯೂ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.

ಜಾಗೃತಿ ಅಗತ್ಯ

ಹೂಡಿಕೆ ಅವಕಾಶಗಳು, ಉದ್ಯೋಗದ ಕೊಡುಗೆಗಳು ಹಾಗೂ ವೈವಾಹಿಕ ಸಂಬಂಧದ ಪ್ರಸ್ತಾಪಗಳನ್ನು ಪರಿಶೀಲಿಸಿದ ಬಳಿಕವೇ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಕು ಅಥವಾ ಹಣ ವರ್ಗಾಯಿಸಬೇಕು ಎಂದು ಪವನ್ ಕುಮಾರ್ ಸಲಹೆ ನೀಡಿದರು.

ತಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಪರ್ಕಗಳಿವೆ ಎಂಬುದನ್ನು ಪರಿಶೀಲಿಸಲು ಹಾಗೂ ಅಪರಿಚಿತ ಸಂಪರ್ಕಗಳ ಬಗ್ಗೆ ದೂರು ಸಲ್ಲಿಸಲು ದೂರಸಂಪರ್ಕ ಇಲಾಖೆಯ ಸಂಚಾರ್ ಸಾಥಿ ಪೋರ್ಟಲ್‌ನ Know Your Mobile Connections ಸೌಲಭ್ಯವನ್ನು ಬಳಸಿಕೊಳ್ಳುವಂತೆ ಅವರು ತಿಳಿಸಿದರು.

ಸೈಬರ್ ಹಣಕಾಸು ವಂಚನೆಗೆ ಒಳಗಾದವರು ತಕ್ಷಣವೇ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ, ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ ದೂರು ದಾಖಲಿಸಬೇಕು ಎಂದು ಹೇಳಿದರು.

ಪೊಲೀಸ್ ಕಾನ್‌ಸ್ಟೆಬಲ್ ಜಯಲಕ್ಷ್ಮಿ ಮಾತನಾಡಿ, ಜವಾಬ್ದಾರಿಯುತ ಮೊಬೈಲ್ ಬಳಕೆ, ಡಿಜಿಟಲ್ ಗೌಪ್ಯತೆ ಕಾಪಾಡಿಕೊಳ್ಳುವುದು ಹಾಗೂ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರು ಜಾಗೃತರಾಗಿರುವುದು ಅತ್ಯಗತ್ಯ ಎಂದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಅಧ್ಯಕ್ಷತೆ ವಹಿಸಿದ್ದರು.

ಎಂ.ಕಾಂ. ವಿದ್ಯಾರ್ಥಿನಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಚಿತ್ರಾ ಸ್ವಾಗತಿಸಿದರು. ಅಭಿಲಾಷಾ ವಂದಿಸಿದರು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ರಾಕೇಶ್ ಮತ್ತು ಡಾ. ಸಫಿಯಾ, ಉಪನ್ಯಾಸಕರಾದ ಆಶಾ, ಸೋನಿಯಾ ನೊರೊನ್ಹಾ, ಸ್ಮಿತಾ ಹಾಗೂ ಶಶಿಕಲಾ ಉಪಸ್ಥಿತರಿದ್ದರು.