ಯುವಜನತೆಗೆ ಸಂಸ್ಕಾರದ ದಾರಿ ತೋರಿಸುವಲ್ಲಿ ಭಜನೆ ಮಹತ್ವದ್ದು : ಉಜಿರೆಯ ಅಶೋಕ ಭಟ್

0
14

ಧರ್ಮಸ್ಥಳ : ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ. ಜ್ಞಾನವನ್ನು ಸಂಪಾದಿಸುವುದರ ಜತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ. ಭಜನೆಯ ಮೂಲಕ ಭಕ್ತಿ ಹಾಗೂ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬಹುದು ಎಂದು ಉಜಿರೆಯ ಅಶೋಕ ಭಟ್ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 28ನೇ ವರ್ಷದ ಭಜನಾ ಕಮ್ಮಟದ ಮೂರನೇ ದಿನವಾದ ಸೆ.30ರಂದು ನಡೆದ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ಇಂದಿನ ಯುವ ಸಮಾಜವು ವ್ಯವಹಾರಿಕ ಜೀವನ, ಉದ್ಯೋಗ ಹಾಗೂ ಸಂಪಾದನೆಯ ಬದುಕಿನ ನಡುವೆ ಸಂಸ್ಕಾರವನ್ನು ಮರೆಯುತ್ತಿರುವುದು ವಿಷಾದನೀಯ. ಆಧುನಿಕ ಜೀವನಶೈಲಿಯ ಒತ್ತಡಗಳ ನಡುವೆಯೂ ಭಕ್ತಿ, ಶಿಸ್ತು, ನೈತಿಕತೆ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಯುವಜನರಲ್ಲಿ ಹೆಚ್ಚುತ್ತಿರುವ ವಿವಿಧ ವ್ಯಸನಗಳ ಹಿಂದೆ ಸಂಸ್ಕಾರದ ಕೊರತೆಯೂ ಪ್ರಮುಖ ಕಾರಣವಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ, ಮೌಲ್ಯಗಳು ಹಾಗೂ ಶಿಸ್ತಿನ ಬದುಕಿನ ಮಹತ್ವವನ್ನು ತಿಳಿಸಬೇಕು. ಮಕ್ಕಳ ಮೇಲಿನ ಅತಿಯಾದ ಮೋಹ-ವಾತ್ಸಲ್ಯವು ಕೆಲವೊಮ್ಮೆ ಅವರ ತಪ್ಪುಗಳನ್ನು ಗುರುತಿಸಿ ತಿದ್ದುವಲ್ಲಿ ಪೋಷಕರಿಗೆ ಅಡ್ಡಿಯಾಗುತ್ತಿದ್ದು, ಪ್ರೀತಿಯ ಜತೆಗೆ ಅಗತ್ಯವಾದ ಶಿಸ್ತು ಮತ್ತು ಸಂಸ್ಕಾರವನ್ನೂ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು.

ಭಗವಂತನ ಸ್ಮರಣೆ, ಭಜನೆ ಮತ್ತು ಸತ್ಸಂಗಗಳು ವ್ಯಕ್ತಿಯ ಮನಸ್ಸನ್ನು ಉತ್ತಮ ಚಿಂತನೆಯತ್ತ ಕೊಂಡೊಯ್ಯುವಲ್ಲಿ ಸಹಕಾರಿಯಾಗುತ್ತವೆ. ಭಜನೆಯು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಜೀವನದಲ್ಲಿ ಭಕ್ತಿ, ಏಕಾಗ್ರತೆ, ಶಿಸ್ತು, ಸನ್ನಡತೆ ಹಾಗೂ ಪರಸ್ಪರ ಬಾಂಧವ್ಯವನ್ನು ಬೆಳೆಸುವ ಸಾಧನೆಯಾಗಿದೆ ಎಂದು ಅಶೋಕ ಭಟ್ ತಿಳಿಸಿದರು.

ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಹಾಗೂ ಸಂಪಾದನೆಗೆ ಸೀಮಿತವಾಗದೆ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಪೂರಕವಾಗಬೇಕು. ಜ್ಞಾನ ಮತ್ತು ಸಂಸ್ಕಾರ ಎರಡೂ ಜೊತೆಯಾಗಿ ಸಾಗಿದಾಗ ಮಾತ್ರ ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸಲು ಸಾಧ್ಯ ಎಂದು ಅವರು ಹೇಳಿದರು.

ಭಜನಾ ಪರಂಪರೆಯ ಮೂಲಕ ಮಕ್ಕಳಿಂದ ಹಿಡಿದು ಯುವಜನತೆ ಹಾಗೂ ಹಿರಿಯರವರೆಗೆ ಭಕ್ತಿ ಮತ್ತು ಸಂಸ್ಕಾರದ ಸಂದೇಶವನ್ನು ತಲುಪಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಭಜನಾ ಕಮ್ಮಟಗಳು ಭಜನಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜತೆಗೆ ಸಮಾಜದಲ್ಲಿ ಸಂಸ್ಕಾರದ ಮಹತ್ವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.