ಉಡುಪಿ: ಕೃಷ್ಣಮಠದಲ್ಲಿ ಜ.18ರಂದು ನಡೆಯುವ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವಕ್ಕೆ ಪೂರ್ವಭಾವಿ 4 ಮುಹೂರ್ತಗಳಲ್ಲಿ ಕೊನೆಯದಾದ ಧಾನ್ಯ ಮುಹೂರ್ತ ಕೃಷ್ಣಮಠದ ಆವರಣದಲ್ಲಿ ಡಿ.14ರಂದು ನೆರವೇರಲಿದೆ ಎಂದು ಶೀರೂರು ಮಠದ ದಿವಾನ್ ಉದಯ ಕುಮಾರ್ ಸರಳತ್ತಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ 6.15ಕ್ಕೆ ಶೀರೂರು ಮಠದಲ್ಲಿ ದೇವತಾ ಪ್ರಾರ್ಥನೆ, ಬಳಿಕ ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ, ಕೃಷ್ಣಮುಖ್ಯಪ್ರಾಣ, ಗರುಡ ದೇವರು ಮತ್ತು ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು. ನಂತರ ರಥಬೀದಿಯಲ್ಲಿ ಚೆಂಡೆ, ವಾದ್ಯ ಸಹಿತ ಮಂತ್ರ ಘೋಷಗಳೊಂದಿಗೆ ಚಿನ್ನದ ಪಲ್ಲಕಿಯಲ್ಲಿ ಅಕ್ಕಿಮುಡಿಯನ್ನಿಟ್ಟು ಮೆರವಣಿಗೆಯಲ್ಲಿ ತಂದು 7.45ಕ್ಕೆ ಧನುರ್ಲಗ್ನ ಸುಮುಹೂರ್ತದಲ್ಲಿ ಬಡಗುಮಾಳಿಗೆಯ ಗದ್ದುಗೆಯಲ್ಲಿ ನಾಲ್ಕು ಮುಡಿಗಳ ಮೇಲೆ ಕಿರು ಮುಡಿಯಿಟ್ಟು ಪೂಜೆ ಸಲ್ಲಿಸಲಾಗುವುದು. ನಂತರದ ದಿನಗಳಲ್ಲಿ ಭಕ್ತರು ತಾವು ಬೆಳೆದ ಸಲನ್ನು ಭಗವಂತನಿಗೆ ಅರ್ಪಿಸಲು ಅವಕಾಶ ಲಭ್ಯವಾಗಲಿದೆ. ಇದೇ ಸಂದರ್ಭದಲ್ಲಿ ಕಟ್ಟಿಗೆ ರಥದ ಶಿಖರಕ್ಕೆ ಧ್ವಜವನ್ನು ಪ್ರತಿಷ್ಠಾಪಿಸವ ಕಾರ್ಯವೂ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ಹೊರೆಕಾಣಿಕೆ ಸಮಿತಿಯ ಸುಪ್ರಸಾದ್ ಶೆಟ್ಟಿ, ನಂದನ್ ಜೈನ್, ಮಧುಕರ ಮುದ್ರಾಡಿ ಉಪಸ್ಥಿತರಿದ್ದರು

