ವಾಣಿಜ್ಯ LPG ಬಳಕೆದಾರರಿಗೆ ಬಿಗ್ ರಿಲೀಫ್ : ಎಲ್ಲಾ ನಿರ್ಬಂಧ ತೆರವುಗೊಳಿಸಿದ ಕೇಂದ್ರ ಸರ್ಕಾರ!

0
146

ನವದೆಹಲಿ : ವಾಣಿಜ್ಯ ಎಲ್‌ಪಿಜಿ (LPG) ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟು ಶಮನಗೊಂಡಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆಯ ಮೇಲಿದ್ದ ಎಲ್ಲಾ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ದೇಶೀಯ ಎಲ್‌ಪಿಜಿ ಉತ್ಪಾದನೆ ಹೆಚ್ಚಳ ಹಾಗೂ ವಿದೇಶಗಳಿಂದ ಆಮದು ಆಗುತ್ತಿರುವ ಎಲ್‌ಪಿಜಿ ಪ್ರಮಾಣದಲ್ಲಿ ಗಣನೀಯ ಸುಧಾರಣೆ ಕಂಡುಬಂದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಿಂದೆ ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಗೃಹಬಳಕೆಯ ಅಡುಗೆ ಅನಿಲದ ಕೊರತೆ ಉಂಟಾಗದಂತೆ ತಡೆಯಲು ಅಗತ್ಯ ವಸ್ತುಗಳ ಕಾಯ್ದೆಯಡಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಎಲ್‌ಪಿಜಿ ಉತ್ಪಾದನೆಗೆ ಅಗತ್ಯವಿರುವ C3 ಮತ್ತು C4 ಕಚ್ಚಾ ವಸ್ತುಗಳನ್ನು ಪೆಟ್ರೋಕೆಮಿಕಲ್ ವಲಯದಿಂದ ಎಲ್‌ಪಿಜಿ ಉತ್ಪಾದನೆಗೆ ಮರುಹಂಚಿಕೆ ಮಾಡಲಾಗಿತ್ತು.

ಈಗ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ, ಸಂಘರ್ಷದ ಸಮಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಬೃಹತ್ ಪ್ರಮಾಣದ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಬಳಕೆಯ ಮಟ್ಟದ ಶೇ.50ರಷ್ಟು ಪುನರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜೊತೆಗೆ, ಪೆಟ್ರೋಕೆಮಿಕಲ್ ಹಾಗೂ ಇತರ ಕೈಗಾರಿಕಾ ವಲಯಗಳಿಗೆ C3 ಮತ್ತು C4 ಕಚ್ಚಾ ವಸ್ತುಗಳ ಹಂಚಿಕೆಯನ್ನೂ ಹೆಚ್ಚಿಸಲಾಗಿದೆ.

ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವಂತೆ, ವಾಣಿಜ್ಯ ಬಳಕೆಯ ಮೇಲಿನ ನಿರ್ಬಂಧ ತೆರವುಗೊಳಿಸಿದರೂ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ದೇಶದ ಒಟ್ಟು ಎಲ್‌ಪಿಜಿ ಉತ್ಪಾದನೆ ದಿನಕ್ಕೆ ಕನಿಷ್ಠ 40 ಟಿಎಂಟಿಗಿಂತ ಕಡಿಮೆಯಾಗದಂತೆ ತೈಲ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.

ಇದೇ ವೇಳೆ, ಪರಿಸರ ಸ್ನೇಹಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಕೆಯನ್ನು ವಿಸ್ತರಿಸುವ ಯೋಜನೆಯನ್ನು ಸರ್ಕಾರ ಮುಂದುವರಿಸಿದ್ದು, ಈಗಾಗಲೇ ಪಿಎನ್‌ಜಿಗೆ ಬದಲಾಗಿರುವ ಗ್ರಾಹಕರು ಅದನ್ನೇ ಮುಂದುವರಿಸಲಿದ್ದಾರೆ. ಉಳಿದ ವಾಣಿಜ್ಯ ಬಳಕೆದಾರರನ್ನೂ ಹಂತ ಹಂತವಾಗಿ ಪಿಎನ್‌ಜಿ ಜಾಲಕ್ಕೆ ಸೇರಿಸುವ ಯೋಜನೆ ರೂಪಿಸಲಾಗಿದೆ.

ಈ ಪರಿಷ್ಕೃತ ಪೂರೈಕೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here