ಮಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಷನ್ (Enumeration) ಫಾರ್ಮ್ ವಿತರಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ.
ರಾಜ್ಯದ ಸುಮಾರು 59,050 ಬಿಎಲ್‌ಒಗಳು ಮೊಬೈಲ್ ಆ್ಯಪ್ ಮೂಲಕ ಪ್ರಕ್ರಿಯೆ ನಡೆಸಲಿದ್ದು, ಪ್ರತಿಯೊಬ್ಬ ಮತದಾರರಿಗೆ ಎರಡು ಪ್ರತಿಗಳ ಫಾರ್ಮ್ ನೀಡಲಾಗುತ್ತದೆ. ಮತದಾರರು ಫಾರ್ಮ್ ಅನ್ನು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಭರ್ತಿ ಮಾಡಿ, ಸಹಿ ಮಾಡಿ ಬಿಎಲ್‌ಒಗಳಿಗೆ ಮರಳಿಸಬೇಕು.
ಫಾರ್ಮ್ ಸಲ್ಲಿಸದಿದ್ದರೆ ಏನಾಗುತ್ತದೆ?
ಚುನಾವಣಾಧಿಕಾರಿಗಳ ಮಾಹಿತಿ ಪ್ರಕಾರ, ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಿದ ಮತದಾರರ ಹೆಸರನ್ನು ಮಾತ್ರ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಮಾಹಿತಿ ಪರಿಶೀಲನೆಯ ಬಳಿಕ ವ್ಯತ್ಯಾಸ ಕಂಡುಬಂದರೆ ಮಾತ್ರ ನೋಟಿಸ್ ನೀಡಲಾಗುತ್ತದೆ. ಆಗಸ್ಟ್ 5ರ ನಂತರ ಅಗತ್ಯವಿದ್ದರೆ ಮಾತ್ರ ದಾಖಲೆಗಳನ್ನು ಕೇಳಲಾಗುತ್ತದೆ. ಅಲ್ಲಿಯವರೆಗೆ ಯಾವುದೇ ದಾಖಲೆಗಳನ್ನು ಬಿಎಲ್‌ಒಗಳಿಗೆ ನೀಡಬಾರದು ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮನೆಗೆ ಅಧಿಕಾರಿಗಳು ಬಂದಾಗ ಏನು ಮಾಡಬೇಕು?
- ಬಿಎಲ್‌ಒಗಳು ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಿಸುತ್ತಾರೆ.
- ಫಾರ್ಮ್ ಭರ್ತಿ ಮಾಡಿ ಸಹಿಯೊಂದಿಗೆ ಬಿಎಲ್‌ಒಗಳಿಗೆ ಹಿಂತಿರುಗಿಸಬೇಕು.
- ಮನೆಯವರು ಇಲ್ಲದಿದ್ದರೆ ಬಳಿಕ ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಎರಡು ಬಣ್ಣದ ಸ್ಟಿಕ್ಕರ್‌ಗಳು
ಮನೆಗಳಿಗೆ ಭೇಟಿ ನೀಡುವ ವೇಳೆ ಬಿಎಲ್‌ಒಗಳು ಎರಡು ಬಗೆಯ ಸ್ಟಿಕ್ಕರ್‌ಗಳನ್ನು ಅಂಟಿಸಲಿದ್ದಾರೆ.
- ನೇರಳೆ (Purple) ಬಣ್ಣದ ಸ್ಟಿಕ್ಕರ್: ಎನ್ಯುಮರೇಷನ್ ಫಾರ್ಮ್ ಯಶಸ್ವಿಯಾಗಿ ವಿತರಿಸಲಾಗಿದೆ ಎಂಬ ಸೂಚನೆ.
- ಕೆಂಪು (Red) ಬಣ್ಣದ ಸ್ಟಿಕ್ಕರ್: ಮನೆಗೆ ಬೀಗ ಹಾಕಿರುವ ಕಾರಣ ಅಧಿಕಾರಿಗಳು ಭೇಟಿ ನೀಡಲು ಸಾಧ್ಯವಾಗಿಲ್ಲ. ಮುಂದಿನ ಭೇಟಿ ದಿನಾಂಕ ಹಾಗೂ ಮಾಹಿತಿ ಈ ಸ್ಟಿಕ್ಕರ್‌ನಲ್ಲಿ ನಮೂದಿಸಲಾಗಿರುತ್ತದೆ.
ಎನ್ಯುಮರೇಷನ್ ಫಾರ್ಮ್‌ನಲ್ಲಿ ಕೇಳಲಾಗುವ ಪ್ರಮುಖ ಮಾಹಿತಿ
- ಮತದಾರರ ಹೆಸರು
- EPIC (ಮತದಾರರ ಗುರುತಿನ ಚೀಟಿ) ಸಂಖ್ಯೆ
- ಸಂಬಂಧಿಕರ ಹೆಸರು ಮತ್ತು ಸಂಬಂಧ
- ಜಿಲ್ಲೆ, ರಾಜ್ಯ
- ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಸಂಖ್ಯೆ
- ಮತಗಟ್ಟೆ (ಭಾಗ) ಸಂಖ್ಯೆ
- ಕ್ರಮ ಸಂಖ್ಯೆ
- ಜನ್ಮ ದಿನಾಂಕ
- ಆಧಾರ್ ಸಂಖ್ಯೆ
- ಮೊಬೈಲ್ ಸಂಖ್ಯೆ
- ತಂದೆ/ತಾಯಿ ಅಥವಾ ಪೋಷಕರ ಹೆಸರು ಹಾಗೂ EPIC ಸಂಖ್ಯೆ
- ವಿವಾಹಿತರಾದರೆ ಗಂಡ/ಹೆಂಡತಿಯ ಹೆಸರು ಮತ್ತು EPIC ಸಂಖ್ಯೆ
ರಾಜ್ಯ ಚುನಾವಣಾಧಿಕಾರಿಗಳು ಮತದಾರರು ಬಿಎಲ್‌ಒಗಳೊಂದಿಗೆ ಸಹಕರಿಸಿ, ಸಮಯಕ್ಕೆ ಸರಿಯಾಗಿ ಫಾರ್ಮ್ ಸಲ್ಲಿಸುವ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

