ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

0
64

ಮಂಗಳೂರು : ನಗರದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4ಕ್ಕೆ ಆಗಮಿಸಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಅಂಗವಿಕಲರ ಬೋಗಿಯಲ್ಲಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಜುಲೈ 18ರಂದು ರೈಲು ನಿಲ್ದಾಣಕ್ಕೆ ರೈಲು ಆಗಮಿಸಿದ ವೇಳೆ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಕುರಿತು ಸ್ಟೇಷನ್ ಮಾಸ್ಟರ್ ಆಕಾಶ್ ಕುಮಾರ್ ಮೀನಾ ಅವರು ತಕ್ಷಣ ರೈಲ್ವೆ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವೈದ್ಯರು ಪರಿಶೀಲನೆ ನಡೆಸಿದ ಬಳಿಕ ವ್ಯಕ್ತಿ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಈ ಸಂಬಂಧ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೃತ ವ್ಯಕ್ತಿಯು ಸುಮಾರು 45 ವರ್ಷ ವಯಸ್ಸಿನವರಾಗಿದ್ದು, ಅಂದಾಜು 4.5 ಅಡಿ ಎತ್ತರ, ಮಧ್ಯಮ ಮೈಕಟ್ಟು ಹಾಗೂ ದುಂಡಗಿನ ಮುಖ ಹೊಂದಿದ್ದರು. ಅವರ ಎರಡೂ ಕಾಲುಗಳು ಮೊಣಕಾಲಿನ ಕೆಳಭಾಗದಿಂದ ತುಂಡಾಗಿದ್ದವು. ಬಲಗೈಯಲ್ಲಿ “ಪೂಜಾರಿ ಅನಿಲ್” ಎಂಬ ಹಚ್ಚೆ ಗುರುತು ಪತ್ತೆಯಾಗಿದೆ.

ಮೃತದೇಹ ಪತ್ತೆಯಾದ ವೇಳೆ ಅವರು ಸಿಮೆಂಟ್ ಬಣ್ಣದ ಜೆರ್ಸಿ, ಚೆಕ್ಸ್ ಶರ್ಟ್, ಕಪ್ಪು ಟಿ-ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬರ್ಮುಡಾ ಶಾರ್ಟ್ಸ್ ಧರಿಸಿದ್ದರು. ಅವರ ಬಳಿ ದೊರೆತ ಸಣ್ಣ ನೋಟ್‌ಬುಕ್‌ನಲ್ಲಿ “ಅನಿಲ್ ಮಾರುತಿ”, “ಕೋಲ್ಕತ್ತಾ”, “ಮುಂಬೈ ಮಾಲಾಡ್ ಈಸ್ಟ್” ಹಾಗೂ “ಜಾಮ್ ರುಷಿ” ಎಂಬ ವಿವರಗಳು ನಮೂದಾಗಿರುವುದು ತನಿಖೆಗೆ ಸುಳಿವಾಗಿದೆ.

ಮೃತರ ಗುರುತು ಅಥವಾ ಅವರ ಕುಟುಂಬದವರ ಬಗ್ಗೆ ಮಾಹಿತಿ ಇರುವವರು ತಕ್ಷಣ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9480802121, 9480800470, ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ 9480802140 ಅಥವಾ 0824-2220559 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.