ಹೆಬ್ರಿ :ಸರಕಾರ ಆರೋಗ್ಯದ ಬಗ್ಗೆ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಅದರ ಸದುಪಯೋಗವನ್ನು ಪಡೆದು ಉತ್ತಮ ಆರೋಗ್ಯವಂತರಾಗಿ ಸಮಾಜದ ಏಳಿಗೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳೋಣ ಎಂದು ಮುದ್ರಾಡಿಯ ಹಿರಿಯ ಸಮಾಜಸೇವಕರಾದ ಗಣಪತಿ ಎಂ. ಹೇಳಿದರು.
ಅವರು ಮುದ್ರಾಡಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ ಸ್ತನ್ಯಪಾನ ಸಪ್ತಾಹ, ಅನ್ನಪ್ರಾಶನ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟಿಸಿ ಮಾತನಾಡಿದರು. ಸಮುದಾಯ ಆರೋಗ್ಯ ಅಧಿಕಾರಿ ಉಷಾ ಹೆಗ್ಡೆ ಮಾತನಾಡಿ ಆರೋಗ್ಯ ಚೆನ್ನಾಗಿದ್ದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಆ ನಿಟ್ಟಿನಲ್ಲಿ ಜನರ ಆರೋಗ್ಯದ ಬಗ್ಗೆ ಸರಕಾರ ಒದಗಿಸುವ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇಲಿ ಜ್ವರ, ಮಲೇರಿಯಾ ಸಹಿತ ವಿವಿಧ ಕಾಯಿಲೆಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಹದಿಹರೆಯದ ಹೆಣ್ಣುಮಕ್ಕಳಿಗೆ ನೀಡುವ ಎಚ್ ಪಿ ವಿ ಲಸಿಕೆಯನ್ನು ಹಾಕಿಸುವಂತೆ ತಾಯಂದಿರು ಮಕ್ಕಳಿಗೆ ತಿಳಿಸಿ. ತಾಯಿಯು ಎದೆ ಹಾಲು ನೀಡುವುದರಿಂದ ತಾಯಿ ಮತ್ತು ಮಗುವಿಗೆ ಉಂಟಾಗುವ ಪ್ರಯೋಜನವನ್ನು ವಿವರಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುದ್ರಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಷ್ ಖಾರ್ವಿ ತಾಯಿಯ ಹಾಲು ಅಮೃತಕ್ಕೆ ಸಮಾನ. ಮಕ್ಕಳ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುವಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು. ಪಂಚಾಯತ್ ನ ನಿಕಟಪೂರ್ವ ಉಪಾಧ್ಯಕ್ಷೆ ರಮ್ಯಾಕಾಂತಿ, ನಿಕಟಪೂರ್ವ ಸದಸ್ಯರಾದ ಸನತ್ ಕುಮಾರ್, ಶುಭದರ ಶೆಟ್ಟಿ,ರಿಕ್ಷಾ ಚಾಲಕ ಮಾಲಕರ ಸಂಫದ ಅಧ್ಯಕ್ಷರಾದ ಕೃಷ್ಣ ಶೆಟ್ಟಿಗಾರ್, ಬೆಂಬಲ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ, ಪೋಷಕರು, ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಒದಗಿಸಿದ ಕಲಿಕಾ ಪರಿಕರಗಳನ್ನು ಮಕ್ಕಳಿಗೆ ವಿತರಿಸಲಾಯಿತು ಹಾಗೂ ಜಂತು ಹುಳ ಮಾತ್ರೆ ವಿತರಣೆ ಹಾಗೂ ಬಾಲ ವಿಕಾಸ ಸಮಿತಿ ಸಭೆ ನಡೆಯಿತು.ಉಮಾ ಅಶೋಕ ಭಂಡಾರಿ ಪ್ರಾರ್ಥಿಸಿದರು. ಅಂಗನವಾಡಿ ಶಿಕ್ಷಕಿ ಸುಧಾ ಕಾರ್ಯಕ್ರಮ ನಿರೂಪಿಸಿ, ಆಶಾ ಕಾರ್ಯಕರ್ತೆ ಅನಿತಾ ವಂದಿಸಿದರು. ಆಶಾ ಕಾರ್ಯಕರ್ತೆ ಸರಿತಾ, ಸಂಜೀವಿನಿ ಎಂ. ಬಿ. ಕೆ. ಸುಧಾ ಕುಮಾರಿ, ಅಂಗನವಾಡಿ ಸಹಾಯಕಿ ಪೂರ್ಣಿಮಾ ಸಹಕರಿಸಿದರು.

