ದಿನಾಂಕ: 11-12-2025 ಸಮಯ: ಪೂರ್ವಾಹ್ನ 11:00 – ಮಧ್ಯಾಹ್ನ 1:00 ,ಸ್ಥಳ: ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಮುಳಿಹಿತ್ಲು ಕಛೇರಿ
ಆಯೋಜಕರು: ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.), ಮುಳಿಹಿತ್ಲು
ಸಹಯೋಗ: ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರು
ಸಂಪನ್ಮೂಲ ವ್ಯಕ್ತಿಗಳು: ಶ್ರೀಮತಿ ಸಪ್ನಾ ಅವಿನಾಶ್, ಶ್ರೀಮತಿ ಜಯಶ್ರೀ ಬಲ್ಲಾಳ್, ಶ್ರೀಮತಿ ಶೀಲಾ ತಿಲಕ
11-12-2025 ರಂದು ಪೂರ್ವಾಹ್ನ 11:00 ಗಂಟೆಗೆ ಮುಳಿಹಿತ್ಲಿನ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ಕಛೇರಿಯಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರು ಇವರ ಸಹಯೋಗದಲ್ಲಿ “ವ್ಯಸ್ತ ಜೀವನ – ಸ್ವಸ್ಥ ಭೋಜನ” ಪೌಷ್ಟಿಕ ಆಹಾರ ತಯಾರಿಕಾ ಕಾರ್ಯಾಗಾರವನ್ನು ಆಯೋಜಿಸಲಾಯಿತು. 1ರಿಂದ 10ನೇ ತರಗತಿಯ ಮಕ್ಕಳ ತಾಯಂದಿರನ್ನು ವಿಶೇಷವಾಗಿ ಆಹ್ವಾನಿಸಲಾಗಿದ್ದು, ಒಟ್ಟು 21 ಮಹಿಳೆಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಕಾರ್ಯಕ್ರಮವು ಪ್ರಾರ್ಥನೆ, ಸ್ವಾಗತ ಮತ್ತು ಪರಿಚಯದಿಂದ ಆರಂಭಗೊಂಡಿತು. ಸಂಘಟಕರಾದ ಶ್ರೀಮತಿ ಮಂಜುಳಾ ಜಿ (ಟ್ರಸ್ಟಿನ ತಜ್ಞರ ಸಮಿತಿಯ ಪ್ರಮುಖರು) ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಸ್ವಾಗತ ಕೋರಿದರು. ಬಳಿಕ ಶ್ರೀಮತಿ ಸಪ್ನಾ ಅವಿನಾಶ್ ಅವರು ಸಾವಯವ ಕೃಷಿಕ ಗ್ರಾಹಕ ಬಳಗದ ಪರಿಚಯ ಮತ್ತು ಅದರ ಕಾರ್ಯವೈಖರಿಯನ್ನು ಪ್ರಸ್ತುತಪಡಿಸಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಬಳಗ ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದರು.
ತದನಂತರ ಶ್ರೀಮತಿ ಜಯಶ್ರೀ ಬಲ್ಲಾಳ್ ಅವರು “ವ್ಯಸ್ತ ಜೀವನ – ಸ್ವಸ್ಥ ಭೋಜನ” ಎಂಬ ಪರಿಕಲ್ಪನೆಯ ಅಗತ್ಯತೆ ಮತ್ತು ಇಂದಿನ ಜೀವನಶೈಲಿಯಲ್ಲಿ ಪೌಷ್ಟಿಕ ಆಹಾರದ ಮಹತ್ವವನ್ನು ವಿವರಿಸಿದರು. ನಂತರ ಶ್ರೀಮತಿ ಶೀಲಾ ತಿಲಕ್ ಅವರು ಆರೋಗ್ಯಕರ ಆಹಾರ ತಯಾರಿಕೆ ಕುರಿತು ಸಾಮಾನ್ಯ ಪರಿಚಯ ನೀಡಿದ್ದು, ನೈಸರ್ಗಿಕ ಪದಾರ್ಥಗಳ ಮಹತ್ವ ಹಾಗೂ ಪೌಷ್ಟಿಕತೆ ಕುರಿತು ವಿವರಿಸಿದರು.
ಪ್ರಾತ್ಯಕ್ಷಿಕೆ ಭಾಗದಲ್ಲಿ ಮೊದಲಿಗೆ ಶ್ರೀಮತಿ ಜಯಶ್ರೀ ಅವರು ತಂಬುಳಿಯ ಪೌಷ್ಟಿಕ ಮೌಲ್ಯ ಮತ್ತು ತಯಾರಿಕಾ ವಿಧಾನವನ್ನು ಪ್ರದರ್ಶಿಸಿದರು. ನಂತರ ಶ್ರೀಮತಿ ಶೀಲಾ ತಿಲಕ್ ಅವರು ಧಾನ್ಯಗಳಿಂದ ಉಂಡೆ ತಯಾರಿಸುವ ವಿಧಾನವನ್ನು ತೋರಿಸಿ ಅದರ ಪೌಷ್ಟಿಕ ಲಾಭವನ್ನು ವಿವರಿಸಿದರು. ಅಂತಿಮವಾಗಿ ಶ್ರೀಮತಿ ಸಪ್ನಾ ಅವರು ತ್ವರಿತವಾಗಿ ತಯಾರಿಸಬಹುದಾದ ಪೌಷ್ಟಿಕ ಲಘು ಉಪಾಹಾರಗಳ ತಯಾರಿಕೆಯನ್ನು ಪ್ರದರ್ಶಿಸಿದರು, ಇದರಿಂದ ಭಾಗವಹಿಸಿದ ಮಹಿಳೆಯರು ಮನೆಮದೆ ಅನುಸರಿಸಬಹುದಾದ ಸರಳ ಹಾಗೂ ಆರೋಗ್ಯಕರ ರೆಸಿಪಿಗಳನ್ನು ತಿಳಿದುಕೊಳ್ಳುವ ಅವಕಾಶ ಪಡೆದರು.
ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಪ್ರಶ್ನೋತ್ತರ ಅವಧಿ ನಡೆಯಿತು. ನಂತರ ಸಭಿಕರಿಂದ ಅಭಿಪ್ರಾಯ ಸಂಗ್ರಹಣೆಯು ನಡೆದಿದ್ದು, ಕಾರ್ಯಾಗಾರವು ಅತ್ಯಂತ ಉಪಯುಕ್ತ ಮತ್ತು ಜ್ಞಾನವರ್ಧಕವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಅಂತಿಮವಾಗಿ ಡಾ. ನಯನ ಪಕ್ಕಳ (ಟ್ರಸ್ಟಿನ ತಜ್ಞರ ಸಮಿತಿ) ಇವರು ಸಂಪನ್ಮೂಲ ವ್ಯಕ್ತಿಗಳು, ಭಾಗವಹಿಸಿದ ಮಹಿಳೆಯರು ಮತ್ತು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಎರಡು ಗಂಟೆಗಳ ಅವಧಿಯಲ್ಲಿ ನಡೆದ ಈ ಕಾರ್ಯಾಗಾರವು ಪೌಷ್ಟಿಕ ಆಹಾರ ತಯಾರಿಕೆಯ ಮಹತ್ವವನ್ನು ತಿಳಿಸುವುದರ ಜೊತೆಗೆ ದಿನನಿತ್ಯದ ಜೀವನದಲ್ಲಿ ಅನುಸರಿಸಬಹುದಾದ ಆರೋಗ್ಯಕರ ಆಹಾರ ಸಂಸ್ಕೃತಿ ಕುರಿತು ಸಮಗ್ರ ಮಾರ್ಗದರ್ಶನ ನೀಡಿತು.
ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.)
ಸಂಪರ್ಕ: 8296321239


