ಉಡುಪಿ: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕವಾಗಿ ಸೇರ್ಪಡೆ ಮಾಡಿರುವುದರಿಂದ ಕೃಷಿಕರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ಸೆ.19 ರಂದು 10ಗಂಟೆಗೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೈಂದೂರು ವ್ಯಾಪ್ತಿಯ ಸುತ್ತ ಮುತ್ತ ಹತ್ತಾರು ಕುಗ್ರಾಮಗಳಿವೆ. ಕೃಷಿಯೇ ಇಲ್ಲಿನ ಜನರ ಜೀವನಾಧಾರ. 23 ಕಿ.ಮೀ ವ್ಯಾಪ್ತಿ ಬಹುತೇಕ ಅರಣ್ಯ ಭಾಗದಿಂದ ಕೂಡಿದೆ. ರೈತರು ಸಣ್ಣ ಪುಟ್ಟ ಕೆಲಸಕ್ಕೂ ಉಡುಪಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಅಕ್ರಮ ಸಕ್ರಮ ಗ್ರಾಮೀಣ ಕ್ರಪಾಂಕ ಸೌಲಭ್ಯ ಕೂಡ ದೊರೆಯುತ್ತಿಲ್ಲ. ಈಗಾಗಲೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಅಭಿವೃದ್ಧಿ ಹೊಂದಿರುವ ಭೂ ಭಾಗ ಮತ್ತು ಹೇರಳ ಜನ ವಸತಿ ಇರುವಂತಹ ಪ್ರದೇಶಕ್ಕೆ ಸೀಮಿತಗೊಳಿಸಿ, ಅಂದಾಜು 11.98 ಚದರ ಕಿಲೋ ಮೀಟರ್ ಸುತ್ತಳತೆಯ ಭೂ ಪ್ರದೇಶಗಳನ್ನು ಮಾತ್ರ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

