ಮಂಗಳೂರು ರೌಡಿಶೀಟರ್ ಹತ್ಯೆ ಪ್ರಕರಣ, ಹಂತಕರಿಗೆ ಅರ್ಧದಾರಿಯಲ್ಲಿ ಕೈಕೊಟ್ಟ ಕಾರು, ರಿಕ್ಷಾ ಹತ್ತಿ ಬೆಂಗಳೂರಿಗೆ ಪರಾರಿ!

0
107

ಉಳ್ಳಾಲ: ರೌಡಿಶೀಟರ್‌ ಆಗಿದ್ದ ಮೀನಿನ ವ್ಯಾಪಾರಿಯನ್ನು ತಲವಾರಿನಿಂದ ಬರ್ಬರವಾಗಿ ಕಡಿದು ಹತ್ಯೆ ನಡೆಸಿರುವ ಘಟನೆ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯ 66ರ ಫ್ಲೈಓವರ್‌ ನಲ್ಲಿ ಮಾರ್ಚ್ 27 ನಸುಕಿನ ಜಾವ ಸಂಭವಿಸಿದೆ.

ಬಂದರು ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್‌ ಆಗಿದ್ದ, ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್‌ ಹುಸೇನ್‌ (42) ಹತ್ಯೆಯಾದವರು. ಶುಕ್ರವಾರ ನಸುಕಿನ 4.30 ರ ಸುಮಾರಿಗೆ ತನ್ನ ಬುಲೆಟ್‌ ಬೈಕಿನಲ್ಲಿ ಉಚ್ಚಿಲದಿಂದ ಮಂಗಳೂರು ಧಕ್ಕೆಗೆ ತೆರಳುತ್ತಿದ್ದ ಸಂದರ್ಭ ಫ್ಲೈಓವರ್‌ ಮೇಲೆ ಇನೋವಾ ಕಾರಿನಿಂದ ಹಿಂಬದಿಯಿಂದ ಡಿಕ್ಕಿ ಹೊಡೆದ ದುಷ್ಕರ್ಮಿಗಳ ತಂಡ ಬಳಿಕ ತಲವಾರಿನಿಂದ ಕೊಚ್ಚಿ ಹತ್ಯೆ ನಡೆಸಿದೆ. ನಸುಕಿನ ಜಾವ ಆಗಿದ್ದರಿಂದಾಗಿ ದುಷ್ಕರ್ಮಿಗಳ ಕೃತ್ಯವನ್ನು ಯಾರೂ ಗಮನಿಸಿರಲಿಲ್ಲ. 

ಆರಂಭದಲ್ಲಿ ಅಪಘಾತ ಪ್ರಕರಣ ಎಂದು ವಾಹನ ಸವಾರರು ಪೊಲೀಸರಿಗೆ ದೂರವಾಣಿ ಮೂಲಕ ತಿಳಿಸಿದರೂ, ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಗುರುತು ಪತ್ತೆ ನಂತರ ಕೊಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ, ಎಸಿಪಿ ಸಹಿತ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು, ಶ್ವಾನದಳ, ಸೋಕೋ ತಂಡ ಸ್ಥಳದಿಂದ ಮಾಹಿತಿ ಪಡೆದುಕೊಂಡಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

2022ರ ಮೇ,24 ರಂದು ಉಚ್ಚಿಲ ಮುಳ್ಳುಗುಡ್ಡೆಯಲ್ಲಿ ಆರೀಫ್‌ ಮೇಲೆ ನೌಫಾಲ್‌ ಸೇರಿದಂತೆ ನಾಲ್ವರ ತಂಡ ತಲವಾರು ದಾಳಿ ನಡೆಸಿ ಕೊಲೆ ಯತ್ನ ನಡೆಸಿತ್ತು. ಅಂದು ಆರಿಫ್ ಬೆಳಿಗ್ಗೆ ಬಂದರಿಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕೃತ್ಯ ಎಸಗಲಾಗಿತ್ತು. ಮುಳ್ಳುಗುಡ್ಡೆ ಸಮೀಪ ಕಾರಿನೊಳಗೆ ಅಡಗಿ ಕುಳಿತಿದ್ದ ನಾಲ್ವರು ಆರೋಪಿಗಳು, ಬೈಕ್‌ನಲ್ಲಿ ಬಂದ ಆರಿಫ್ ಕಾರಿನ ಸಮೀಪ ತಲುಪುತ್ತಿದ್ದಂತೆಯೇ ಹೊರಬಂದು ಕತ್ತಿಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಈ ವಿಚಾರವಾಗಿ ನೌಫಾಲ್ ತಂಡ ಮತ್ತು ಆರಿಫ್ ಹಾಗೂ ಕರೀಂ ನಡುವೆ ವಾಗ್ವಾದ ನಡೆದಿತ್ತು. ಇದೇ ವೈಷಮ್ಯದಿಂದಾಗಿ ನೌಫಾಲ್, ಸಾಧಿಕ್ ಸೇರಿದಂತೆ ಇನ್ನು ಇಬ್ಬರು ಸೇರಿ ಕೆಲಸಕ್ಕೆ ತೆರಳುತ್ತಿದ್ದ ಆರಿಫ್ ಮೇಲೆ ದಾಳಿ ನಡೆಸಿ ಕೊಲೆ ಯತ್ನ ನಡೆಸಿತ್ತು ಎನ್ನಲಾಗಿದೆ.

ಹಂತಕರ ಇನೋವಾ ಕಾರು ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿಯಲ್ಲಿ ಬೆಳಿಗ್ಗೆ 8ರ ವೇಳೆ ಪತ್ತೆಯಾಗಿದೆ. ಹಂತಕರು ಕಾರಿನಲ್ಲಿ ಸಮಸ್ಯೆ ಕಾಣಿಸಿದ್ದರಿಂದಾಗಿ ಬುಡೋಳಿಯಲ್ಲಿ ನಿಲ್ಲಿಸಿ ರಿಕ್ಷಾದಲ್ಲಿ ತೆರಳಿರುವ ಮಾಹಿತಿಯಿದೆ. ಅಲ್ಲಿಂದ ಬೆಂಗಳೂರು ಕಡೆಗೆ ಪ್ರಯಾಣಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ, ಆರೋಪಿಗಳ ಪತ್ತೆಗಾಗಿ ಬೆಂಗಳೂರಿಗೆ ಪೊಲೀಸರು ತೆರಳಿರುವ ಮಾಹಿತಿಯಿದೆ.

ಆರೀಫ್‌ ವಿರುದ್ಧ 1998 ರಿಂದ 2021 ರ ವರೆಗೆ 9 ಹಲ್ಲೆ, ಹಲ್ಲೆಯತ್ನ ಪ್ರಕರಣಗಳಿವೆ. ಬರ್ಕೆ, ಬಂದರು 2021 ರಲ್ಲಿ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಕುದ್ರೋಳಿ ನಿವಾಸಿಯಾಗಿದ್ದ ಆರೀಫ್‌ ನಿರಂತರ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಇಡೀ ಕುಟುಂಬವನ್ನು ಕೆ.ಸಿ.ರೋಡಿನತ್ತ ಸ್ಥಳಾಂತರಿಸಿದ್ದರು. ಬಳಿಕ ಆರೀಫ್‌ ವಿರುದ್ಧ ದಾಖಲಾದ ಪ್ರಕರಣಗಳು ಇರಲಿಲ್ಲ. ಈ ನಡುವೆ 2022ರಲ್ಲಿ ಕೊಲೆ ಯತ್ನ ನಡೆದಿತ್ತು.

ಆರೋಪಿಗಳಲ್ಲಿ ಪ್ರಮುಖ ವ್ಯಕ್ತಿ ಉಳ್ಳಾಲ ಮೂಲದವನು ಎಂದು ಹೇಳಲಾಗುತ್ತಿದ್ದು, ಆತ ಪರಿಚಿತನಿಂದಲೇ ಎರಡು ದಿನಗಳ ಹಿಂದೆ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಕಾರು ಮಾಲೀಕ ಮೂಲತಃ ಕೇರಳದವನಾಗಿದ್ದರೂ, ಉಳ್ಳಾದಲ್ಲಿದ್ದು, ವಿಟ್ಲದಲ್ಲಿ ಕಾರು ಪತ್ತೆಯಾಗುತ್ತಿದ್ದಂತೆ ಪೊಲೀಸರು ಕಾರು ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 2022 ರಲ್ಲಿ ಬಜಾಲ್‌ ನಿವಾಸಿ ರೌಡಿಶೀಟರ್ ನೌಫಾಲ್‌ ಮತ್ತು ತಂಡ‌, ಆರೀಫ್‌ ಕೊಲೆಗೆ ಯತ್ನಿಸಿದ್ದು, ಸಹೋದರ ಕರೀಮ್‌ ಹಣದ ವಿಚಾರವಾಗಿ ಕೃತ್ಯ ನಡೆದಿತ್ತು ಎಂಬುದು ಅಂದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿತ್ತು.

LEAVE A REPLY

Please enter your comment!
Please enter your name here