ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ – ಹೈಕಮಾಂಡ್ ಸಭೆ ಮುಂದೂಡಿಕೆ

0
7

ನವದೆಹಲಿ : ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಕುರಿತು ತೀವ್ರ ಕುತೂಹಲ ಮೂಡಿದ್ದರೂ, ಹೈಕಮಾಂಡ್ ಮಟ್ಟದಲ್ಲಿ ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ.

ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕರು ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದಾರೆ.

ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಿಂದ ಬೆಂಗಳೂರಿಗೆ ತೆರಳಿರುವ ಕಾರಣ, ಸಂಪುಟ ವಿಸ್ತರಣೆ ಕುರಿತು ನಡೆಯಬೇಕಿದ್ದ ಮಹತ್ವದ ಸಭೆ ಎರಡರಿಂದ ಮೂರು ದಿನಗಳವರೆಗೆ ಮುಂದೂಡಿಕೆಯಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.

ರಾಹುಲ್ ಗಾಂಧಿ ಅವರು ರಾಜ್ಯ ನಾಯಕರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದ್ದು, ಖರ್ಗೆ ಅವರು ಮರಳಿದ ಬಳಿಕ ವಿಸ್ತೃತ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಗತ್ಯವಿದ್ದರೆ ರಾಜ್ಯ ನಾಯಕರನ್ನು ಮತ್ತೊಮ್ಮೆ ದೆಹಲಿಗೆ ಕರೆಯಲಾಗುವುದು ಎಂದೂ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಬೆಳವಣಿಗೆಯಿಂದ ಸಚಿವ ಸಂಪುಟ ವಿಸ್ತರಣೆ ಮತ್ತೊಮ್ಮೆ ಕಗ್ಗಂಟಾಗಿ ಉಳಿದಿದ್ದು, ಸಚಿವ ಸ್ಥಾನ ನಿರೀಕ್ಷೆಯಲ್ಲಿರುವ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ. ಕಾಂಗ್ರೆಸ್ ವಲಯದಲ್ಲಿ ಮುಂದಿನ ಕೆಲ ದಿನಗಳಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.