ಉಡುಪಿ: ನಿಂತಿದ್ದ ಕಂಟೈನರ್ಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೈಂದೂರು ತಾಲೂಕಿನ ನಾವುಂದd ಬಳಿ ನಡೆದಿದೆ. ಘಟನೆಯಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿದ್ದರೆ, ಪತಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಮಮತಾ(36) ಹಾಗೂ ಮಗಳು ಧೃತಿಕಾ(14) ಪ್ರಾಣ ಬಿಟ್ಟಿದ್ದು, ಪತಿ ರಾಘು(40), ಮಕ್ಕಳಾದ ಜಾಹ್ನವಿ(12), ಚಾರ್ವಿ(10) ಹಾಗೂ ಕಾರು ಚಾಲಕ ಕಿರಣ್ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದಲ್ಲಿ ಮೃತಪಟ್ಟವರು ಬೆಂಗಳೂರು ಮೂಲದ ನಿವಾಸಿಗಳು ಎಂಬುದು ತಿಳಿದುಬಂದಿದೆ.
ಬೆಂಗಳೂರನಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬ ಉಡುಪಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿತ್ತು. ಬಳಿಕ ಮುರುಡೇಶ್ವರ ಮತ್ತು ಗೋಕರ್ಣ ಕ್ಷೇತ್ರಗಳ ದರ್ಶನದ ಉದ್ದೇಶದಿಂದ ಬೈಂದೂರು ಮಾರ್ಗವಾಗಿ ಪ್ರಯಾಣ ನಡೆಸುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಗಾಯಾಳು ತಂದೆ ಮತ್ತು ಇಬ್ಬರು ಮಕ್ಕಳಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಕಾರು ಚಾಲಕ ಕಿರಣ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

