ಮುಂಡ್ಕೂರಿನಲ್ಲಿ ಕಾರು-ರಿಕ್ಷಾ ಭೀಕರ ಅಪಘಾತ: ಪ್ರಯಾಣಿಕ ಸಾವು, ನಾಯಿ ಮರಿ ಅನಾಥ

0
192

ಕಾರ್ಕಳ: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯಿಂದ ಸಚ್ಚೇರಿಪೇಟೆ ಕಡೆಗೆ ಸಾಗುವ ರಸ್ತೆಯಲ್ಲಿ ಶುಕ್ರವಾರ ಸಂಜೆ ಕಾರು ಹಾಗೂ ಆಟೋರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಪ್ರಯಾಣಿಕ ಶ್ರೀಕಾಂತ್ ಅವರು ಗಂಭೀರವಾಗಿ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು, ಕಾರು ಭಾಗಶಃ ಹಾನಿಗೊಳಗಾಗಿದೆ. ಗಾಯಗೊಂಡ ಶ್ರೀಕಾಂತ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ಕೈಫ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರು ಚಾಲಕ ಸಚ್ಚೇರಿಪೇಟೆಯ ಅನಂತ್ ಭಟ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಸ್ತೆಯ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ರಿಕ್ಷಾ ಚಾಲಕನ ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಚಾರ ಸುಗಮಗೊಳಿಸಿದರು. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ಮೃತ ಶ್ರೀಕಾಂತ್ ಅವರು ತಮ್ಮೊಂದಿಗೆ ನಾಯಿ ಮರಿಯೊಂದನ್ನು ಕರೆದೊಯ್ಯುತ್ತಿದ್ದು, ಅಪಘಾತದ ಬಳಿಕ ಆ ನಾಯಿ ಮರಿ ಸ್ಥಳದಲ್ಲೇ ಅನಾಥವಾಗಿರುವ ದೃಶ್ಯ ಸ್ಥಳೀಯರ ಮನಕಲಕುವಂತಿತ್ತು.

LEAVE A REPLY

Please enter your comment!
Please enter your name here