ಅನೈತಿಕ ಚಟುವಟಿಕೆ ಪ್ರಕರಣ : ಪಶ್ಚಿಮ ಬಂಗಾಳದ ದಂಪತಿ ಬಂಧನ

0
8

ಉಡುಪಿ : ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅನೈತಿಕ ಚಟುವಟಿಕೆ ನಿಯಂತ್ರಣ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ದಂಪತಿಯನ್ನು ಮಣಿಪಾಲ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಶ್ಚಿಮ ಬಂಗಾಳದ 24 ಪರಗಣ ನಿವಾಸಿಗಳಾದ ಎಸ್ತಾರ್ ಶಾಹ ಅಲಿಯಾಸ್ ಕಾಜಲ್ (40) ಹಾಗೂ ಈಕೆಯ ಪತಿ ಸಂಜಯ ಸಹ (49) ಬಂಧಿತರು.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಆರೋಪಿಗಳು ಕಳೆದ ಒಂದು ವರ್ಷದಿಂದ ಪತ್ತೆಯಾಗದೆ ತಲೆಮರೆಸಿಕೊಂಡಿದ್ದರು. ಆರೋಪಿಗಳು ಪಶ್ಚಿಮ ಬಂಗಾಳ ರಾಜ್ಯದ ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯ ನೇತಾಜಿ ನಗರದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಮಣಿಪಾಲ ಪೊಲೀಸ್ ತಂಡ ನ. 3ರಂದು ಬೆಳಿಗ್ಗೆ 11ಗಂಟೆಗೆ ದಾಳಿ ನಡೆಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದೆ. ಬಂಧಿತ ಆರೋಪಿಗಳನ್ನು ಅಲ್ಲಿನ ಪಶ್ಚಿಮ ಬಂಗಾಳದ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್ ರಿಮಾಂಡ್ ಪಡೆದ ಪೊಲೀಸರು, ನ. 7ರಂದು ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನವೆಂಬರ್ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.