ಉಡುಪಿ: ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿಯಲ್ಲಿ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಸಂಘಟಿತ ಅಪರಾಧಕ್ಕಾಗಿ ಕೋಕಾ ಕಾಯ್ದೆ ಜಾರಿಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಸೆ. 29ರಂದು ರಾತ್ರಿ ಸುಮಾರು 2.15 ಗಂಟೆಗೆ ಆರೋಪಿಗಳು ಜಯಶ್ರೀ ಪೂಜಾರಿ ಅವರಿಗೆ ತಲವಾರು ತೋರಿಸಿ ಬೆದರಿಕೆ ಹಾಕಿ ಮನೆಯ ಹಟ್ಟಿಗೆ ನುಗ್ಗಿ ಹಟ್ಟಿಯಲ್ಲಿದ್ದ 3 ಜಾನುವಾರುಗಳನ್ನು ಕಳವು ಮಾಡಿಕೊಂಡು ಹೋಗಿ ವಧೆ ಮಾಡಿದ್ದರು.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೊಹಮ್ಮದ್ ಯೂನಿಸ್ (31), ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (29), ಮತ್ತು ಮೊಹಮ್ಮದ್ ನಾಸಿರ್ (28) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಇವರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನಂತರ ಸಮಗ್ರ ತನಿಖೆ ನಡೆಸಿದ ಪೊಲೀಸರು ಆರೋಪಿಗಳು ಸಂಘಟಿತವಾಗಿ ಈ ಕೃತ್ಯ ನಡೆಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳ ಜಾಮೀನು ರದ್ದುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಮೊಹಮ್ಮದ್ ಯೂನಿಸ್, ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು , ಮೊಹಮ್ಮದ್ ನಾಸಿರ್ ಹಾಗೂ ಮತ್ತೊಬ್ಬ ಆರೋಪಿ ಶೌಕತ್ ಅಲಿ (36) ಇವರುಗಳನ್ನು ಮರುಬಂಧನ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

