ಮಂಗಳೂರು: ತುಳುನಾಡಿನ ಕೆಲವೆಡೆ ʻಚಡ್ಡಿ ಗ್ಯಾಂಗ್ʼ ಎಂಬ ಕಳ್ಳರ ತಂಡ ಸಕ್ರಿಯವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್‌ನಲ್ಲಿ ಇಂತಹುದೇ ತಂಡವೊಂದು ಮನೆ ಕಳ್ಳತನ ನಡೆಸಿರುವ ಬಗ್ಗೆ ವರದಿಯಾಗಿದೆ.
ಮೈಮೇಲೆ ಚಡ್ಡಿ, ಬನಿಯಾನ್, ತಲೆ ಮೇಲೆ ಬಟ್ಟೆ ಸುತ್ತಿಕೊಂಡು ಈ ಗ್ಯಾಂಗ್ ಕಾರ್ಯಾಚರಿಸುತ್ತಿದೆ. ಗ್ಯಾಂಗಿನ ಸದಸ್ಯರ ಸೊಂಟದಲ್ಲಿ ಆಯುಧಗಳೂ ಇವೆ. ಸಾಮಾನ್ಯವಾಗಿ ಭಾರೀ ಮಳೆಯಾಗುವ ಸಂದರ್ಭ ಜನರು ಗಾಢ ನಿದ್ದೆಗೆ ಜಾರುವ ಹಿನ್ನೆಲೆಯಲ್ಲಿ, ಮನೆಯವರು ಇರುವಾಗಲೆ ಮನೆಗೆ ನುಗ್ಗಿ ಈ ತಂಡ ಕಾರ್ಯಾಚರಣೆಗಿಳಿಯುತ್ತದೆ ಎನ್ನಲಾಗಿದೆ.
ಕೋಡಿಕಲ್‌ನ ವಿವೇಕಾನಂದ ನಗರದಲ್ಲಿ ಮನೆಯವರು ಮಲಗಿದ್ದಾಗ ಕಳ್ಳರು ನುಗ್ಗಿ, ಮನೆಯಿಂದ ಸಿಕ್ಕಿದ್ದನ್ನು ದೋಚಿದ್ದಾರೆ. ಮಧ್ಯರಾತ್ರಿ ಸುಮಾರು 2.04ರ ವೇಳೆಗೆ ಮನೆಯ ಕಿಟಕಿ ಸರಳುಗಳನ್ನು ಕಿತ್ತು ಮನೆಯೊಳಗೆ ನುಗ್ಗಿದ ತಂಡ, ಮನೆಯ ಕೋಣೆಯೊಂದರಲ್ಲಿ ಜಾಲಾಡಿ ಬಳಿಕ ಮನೆಯವರು ಮಲಗಿದ್ದ ಕೋಣೆಗೂ ನುಗ್ಗಿದೆ. ಅಲ್ಲಿ ಕಪಾಟಿನಲ್ಲಿಟ್ಟಿದ್ದ 10,000 ರೂ. ನಗದು ಕಳವು ಮಾಡಿದೆ. ಬೆಳಗ್ಗೆ ಮನೆಯವರು ಎದ್ದಾಗಲೇ ಘಟನೆ ಗಮನಕ್ಕೆ ಬಂದಿದೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನವಾಗಿರುವ ಮನೆಯ ಪಕ್ಕದ ಸಿಸಿಟಿವಿಯಲ್ಲಿ ಕಳ್ಳರು ಬಂದಿರುವ ದೃಶ್ಯ ಸೆರೆಯಾಗಿದೆ. ಅದರಲ್ಲಿ ಕಳ್ಳರು ಚಡ್ಡಿಯಲ್ಲಿರುವುದು ಪತ್ತೆಯಾಗಿದೆ. ಹೀಗಾಗಿ ಇದು ಚಡ್ಡಿ ಗ್ಯಾಂಗ್ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಈ ಕುರಿತ ಸಿಸಿಟಿವಿ ದೃಶ್ಯವೊಂದು ಈಗ ಭಾರೀ ವೈರಲ್ ಆಗಿದೆ.
ಹೈದರಾಬಾದ್, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಸುದ್ದಿಯಾಗಿದ್ದ ಈ ಗ್ಯಾಂಗ್‌ನ ಶೈಲಿಯಲ್ಲಿ ಈ ಹಿಂದೆಯೂ ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಳ್ಳತನಗಳು ನಡೆದಿವೆ ಎನ್ನಲಾಗಿದೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಪೊಲೀಸರು ಕೆಲವೊಂದು ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ರಾತ್ರಿ ಸಮಯ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಬೇಕು, ಬೆಲೆಬಾಳುವ ಸೊತ್ತುಗಳನ್ನು ಮನೆಯಲ್ಲಿಡದೆ ಬ್ಯಾಂಕ್‌ನ ಸೇಫ್ ಲಾಕರ್‌ನಲ್ಲಿಡಬೇಕು. ತಮ್ಮ ಮನೆಯ ಮತ್ತು ಸುತ್ತಮುತ್ತಲ ಪ್ರದೇಶಗಳ ಸಿಸಿಕ್ಯಾಮೆರಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಮುಂತಾದ ಸಲಹೆಗಳನ್ನು ಪೊಲೀಸರು ನೀಡಿದ್ದಾರೆ.