ಸುನೀಲ್ ಕುಮಾರ್ ಹೆಗಲಿಗೆ ರಾಜ್ಯ BJP ಪ್ರಧಾನ ಕಾರ್ಯದರ್ಶಿ ಪಟ್ಟ?

0
164

ಬೆಂಗಳೂರು: ಬಾಕಿ ಇರುವ ಆರೇಳು ರಾಜ್ಯ ಘಟಕಗಳ ಜೊತೆಯಲ್ಲೇ ಕರ್ನಾಟಕ ಬಿಜೆಪಿ ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡುವುದು ಖಚಿತವಾಗಿದೆ. ಯಾವಾಗ ಮತ್ತು ಯಾರು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾದರೂ ಜುಲೈ ಎರಡನೇ ವಾರದೊಳಗೆ ಈ ಪ್ರಕ್ರಿಯೆ ಮುಗಿಯುವುದು ನಿಚ್ಚಳವಾಗಿದೆ. ಈ ಮಧ್ಯೆ ರಾಜ್ಯಾಧ್ಯಕ್ಷ ಸ್ಥಾನದ ಕುರಿತಾಗಿ ಕಳೆದ ಆರು ತಿಂಗಳಿನಿಂದ ಕೆಲವು ಗಂಭೀರ ಬೆಳವಣಿಗೆಗಳು ನಡೆದಿರುವ ಬಗ್ಗೆ ಕುತೂಹಲಕರ ಮಾಹಿತಿಗಳು ಹೊರಬಿದ್ದಿವೆ. ಬಿಜೆಪಿಯಲ್ಲಿ ಆಗಾಗ ಸಕ್ರಿಯವಾಗಿರುವ ತಟಸ್ಥ ಬಣ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೇರಿಸುವ ‌ನಿಟ್ಟಿನಲ್ಲಿ ತೀವ್ರ ಪ್ರಯತ್ನವನ್ನೂ ನಡೆಸಿತ್ತು. ಕೇಂದ್ರ ಸಚಿವ ಸ್ಥಾ‌ನದ ಜೊತೆಗೆ ಅಧ್ಯಕ್ಷ ಸ್ಥಾ‌ನ ಎಂದಾದರೆ ಒಪ್ಪಿಕೊಳ್ಳಬಹುದು ಎಂಬ ಮನಸ್ಥಿತಿಗೂ ಸೋಮಣ್ಣ ತಲುಪಿದ್ದರು. ಆದರೆ, ಅವರಿಗೆ ಕೇಂದ್ರ ಸಚಿವರಾಗಿಯೇ ಒಳ್ಳೆಯ ಕೆಲಸ ಮಾಡುವಂತೆ ಹೈಕಮಾಂಡ್ ಸೂಚಿಸಿದ ಕಾರಣ ಆ ಪ್ರಸ್ತಾಪ ಅಲ್ಲಿಗೆ ಕೊನೆಗೊಂಡಂತಾಗಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ‌ ಬದಲಾಗಿ ಬೇರೆಯವರನ್ನು ನೇಮಿಸಲು ಹೈಕಮಾಂಡ್ ಆರು ತಿಂಗಳ ಹಿಂದೆ ಗಂಭೀರ ಚಿಂತನೆ ನಡೆಸಿತ್ತು ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿಯೊಬ್ಬರು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.

ಸುನೀಲ್ ಕುಮಾರ್ ಜತೆಗೆ ಮಾತುಕತೆ ನಡೆಸಿದ್ದ ಹೈಕಮಾಂಡ್!
ವಿಜಯೇಂದ್ರ‌ ಹೆಸರಿಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಕೋಟಾದಲ್ಲಿ ವಿ. ಸುನೀಲ್ ಕುಮಾರ್, ಲಿಂಗಾಯತ ಮತ್ತು ಪಂಚಮಸಾಲಿ ಕೋಟಾದಲ್ಲಿ ಅರವಿಂದ ಬೆಲ್ಲದ್ ಮತ್ತು ದಲಿತ ಕೋಟಾದಲ್ಲಿ ಅರವಿಂದ ಲಿಂಬಾವಳಿ ಅವನ್ನು ಪರಿಗಣಿಸಬಹುದು ಎಂಬ ಅಭಿಪ್ರಾಯವನ್ನೂ ಹೈಕಮಾಂಡ್ ಹೊಂದಿದೆ ಎಂಬುದನ್ನು ನಡ್ಡಾರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಸ್ವತಃ ಸುನೀಲ್ ಕುಮಾರ್ ಜೊತೆಗೇ ವರಿಷ್ಠರು ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿದ್ದರು. ಆದರೆ, ಆಗ ಸುನೀಲ್ ಕುಮಾರ್ ಕಡೆಯಿಂದ ಸ್ಪಷ್ಟ ನಿಲುವು ವ್ಯಕ್ತವಾಗಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಅಶೋಕ್ ದೆಹಲಿಗೆ ತೆರಳಿರುವ ಕಾರಣ ವಿಪಕ್ಷ ನಾಯಕರ ಸ್ಥಾನದಲ್ಲಿ ಏನಾದರೂ ಬದಲಾವಣೆಯಾಗಬಹುದಾ ಎಂಬ ಕುತೂಹಲವೂ ಶುರುವಾಗಿದೆ. ಒಂದು ವೇಳೆ, ಬದಲಾವಣೆ ಆದಲ್ಲಿ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹೆಗಲಿಗೆ ಜವಾಬ್ದಾರಿ ಏರಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಅಶೋಕ್ ದೆಹಲಿ ಭೇಟಿಯ ನಿಜವಾದ ಗುಟ್ಟು ಏನೆಂಬುದು ಇನ್ನೂ ಬಹಿರಂಗವಾಗಿಲ್ಲ.

LEAVE A REPLY

Please enter your comment!
Please enter your name here