ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮದಿಂದಾಗಿ ಗುಡ್ಡಕುಸಿತ ಭೀತಿಯಿಂದ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧವೇರಿಸಲಾಗಿದೆ. ಪ್ರವಾಸಿಗರು ಸ್ಥಳೀಯ ಲಘು ವಾಹನಗಳಲ್ಲಿ ಮಾತ್ರ ಪ್ರವಾಸಿ ತಾಣಗಳಿಗೆ ಹೋಗಬಹುದು.
ಕಾಫಿನಾಡು ಚಿಕ್ಕಮಗಳೂರು ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಕ್ಕೆ ಬರುತ್ತಾರೆ. ಅದರಲ್ಲೂ ಇಲ್ಲಿನ ಗಿರಿ ಪ್ರದೇಶಗಳಿಗೆ ಬರುವ ಪ್ರವಾಸಿಗರಿಗೆ ಲೆಕ್ಕ ಇಲ್ಲ. ಆದ್ರೆ ಇನ್ಮುಂದೆ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧವೇರಲಾಗಿದೆ. ಗಿರಿಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಗುಡ್ಡಕುಸಿತ, ರಸ್ತೆ ಕುಸಿತ ಸಂಭವಿಸುವ ಭೀತಿಯಿಂದಾಗಿ ಜಿಲ್ಲೆಯಲ್ಲಿ ಕೆಲವು ಪ್ರಮುಖ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ಪ್ರವೇಶ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ತಿಳಿಸಿದ್ದಾರೆ.
ಗಿರಿ ಪ್ರದೇಶಗಳಿಗೆ ಪ್ರವಾಸಿಗರ ನಿರ್ಬಂಧ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ನೀತಿ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರವಾಸಿಗರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಈ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರು ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

