
ಮಂಗಳೂರು : ಆನ್‌ಲೈನ್ ಸೈಬರ್ ವಂಚಕರ ಬಲೆಗೆ ಬಿದ್ದ 38 ವರ್ಷದ ಔಷಧ ವ್ಯಾಪಾರಿಯೊಬ್ಬರು ₹1.1 ಲಕ್ಷ ಹಣ ಕಳೆದುಕೊಂಡ ಘಟನೆ ವರದಿಯಾಗಿದೆ. WhatsApp ಮೂಲಕ ಬಂದ APK ಲಿಂಕ್ ತೆರೆಯುವ ಮೂಲಕ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಆರ್ಡರ್ ಮಾಡಿದ ವಸ್ತುವಿನ ಡೆಲಿವರಿ ವಿವರಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ವ್ಯಾಪಾರಿ WhatsApp ಮೂಲಕ ಬಂದ ಲಿಂಕ್ ತೆರೆದಿದ್ದರು. ಆದರೆ, ಈ ಲಿಂಕ್ ತೆರೆಯುವುದೇ ಅವರಿಗೆ ದುಬಾರಿಯಾಗಿ ಪರಿಣಮಿಸಿದ್ದು, ಬರೋಬ್ಬರಿ ₹1.1 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಸೈಬರ್ ವಂಚಕರು APK ಫೈಲ್‌ಗಳ ಮೂಲಕ ಮೊಬೈಲ್‌ನಲ್ಲಿ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿ, ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕಿಂಗ್ ವಿವರಗಳನ್ನು ಕದಿಯುವ ಸಾಧ್ಯತೆಯಿದೆ. ಇಂತಹ ಅಪ್ಲಿಕೇಶನ್‌ಗಳ ಮೂಲಕ ಮೊಬೈಲ್‌ನಲ್ಲಿನ ಮಾಹಿತಿಗೆ ಅನಧಿಕೃತ ಪ್ರವೇಶ ಪಡೆದು ಹಣ ವರ್ಗಾವಣೆ ಮಾಡುವ ಅಪಾಯವೂ ಇರುತ್ತದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಪರಿಚಿತ ನಂಬರ್‌ಗಳಿಂದ ಬರುವ APK ಫೈಲ್‌ಗಳು ಹಾಗೂ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯದಂತೆ ಎಚ್ಚರಿಕೆ ವಹಿಸಬೇಕು. ವಸ್ತುಗಳ ಡೆಲಿವರಿ ವಿವರಗಳನ್ನು ತಿಳಿದುಕೊಳ್ಳಲು ಸಂಬಂಧಪಟ್ಟ ಅಧಿಕೃತ ಆ್ಯಪ್ ಅಥವಾ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಬೇಕು.
ಒಂದು ವೇಳೆ ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ 1930 ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ ಅಥವಾ www.cybercrime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬೇಕು. ತ್ವರಿತವಾಗಿ ದೂರು ನೀಡುವುದರಿಂದ ವಂಚನೆಗೊಳಗಾದ ಹಣವನ್ನು ತಡೆಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ.
