
ಕುಶಾಲನಗರ : ಸೈನಿಕ ಶಾಲೆ ಕೊಡಗಿನ ೧೯ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು (ಹೆಚ್) ಕ್ರೀಡಾಕೂಟ-2026ರ ಸಮಾರೋಪ ಸಮಾರಂಭವು ಅತ್ಯಂತ ಸಂಭ್ರಮದಿಂದ ನೆರವೇರಿತು.
2007ರ ಅಕ್ಟೋಬರ್ 18ರಂದು ಸ್ಥಾಪನೆಗೊಂಡ ಸೈನಿಕ ಶಾಲೆ ಕೊಡಗು, ಭವಿಷ್ಯದ ಮಿಲಿಟರಿ ನಾಯಕರನ್ನು ರೂಪಿಸುವ ಹಾಗೂ ಯುವ ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ ಮತ್ತು ದೇಶಪ್ರೇಮವನ್ನು ಬೆಳೆಸುವ ಉದ್ದೇಶದೊಂದಿಗೆ ತನ್ನ 19ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಂಡಿತು.

ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ಪರ್ಧಾಳುಗಳ ಆಕರ್ಷಕ ಪಥಸಂಚಲನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಮುಖ್ಯ ಅತಿಥಿಗಳು ಪ್ರಶಸ್ತಿ ಪತ್ರ, ಪದಕ ಹಾಗೂ ಪಾರಿತೋಷಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಲ್ ಅಮರ್ ಜೀತ್ ಸಿಂಗ್, ಪ್ರತಿಷ್ಠಿತ ಕ್ರೀಡಾಕೂಟವು ಶಿಸ್ತು, ಧೈರ್ಯ, ಪರಿಶ್ರಮ, ತಂಡದ ಮನೋಭಾವ ಮತ್ತು ಶ್ರೇಷ್ಠತೆಯ ಅನ್ವೇಷಣೆಯಂತಹ ಸಂಸ್ಥೆಯ ಮೂಲಭೂತ ಮೌಲ್ಯಗಳನ್ನು ಪ್ರತಿಬಿಂಬಿಸಿದೆ ಎಂದು ಹೇಳಿದರು. ಕಳೆದ ಕೆಲವು ದಿನಗಳಲ್ಲಿ ನಡೆದ ಬಾಸ್ಕೆಟ್ಬಾಲ್, ವಾಲಿಬಾಲ್, ಅಥ್ಲೆಟಿಕ್ಸ್, ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆಗಳು ಯುವ ಕೆಡೆಟ್ಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಪರಸ್ಪರ ಕಲಿಯಲು ಉತ್ತಮ ವೇದಿಕೆಯನ್ನು ಒದಗಿಸಿವೆ ಎಂದು ತಿಳಿಸಿ, ಎಲ್ಲ ಸ್ಪರ್ಧಾಳುಗಳನ್ನು ಅಭಿನಂದಿಸಿದರು.

ಕಠಿಣ ಪರಿಶ್ರಮ, ಶಿಸ್ತುಬದ್ಧ ತರಬೇತಿ ಮತ್ತು ತಂಡದ ಮನೋಭಾವದಿಂದ ಮಾತ್ರ ಇಂತಹ ಸಾಧನೆ ಸಾಧ್ಯ ಎಂದು ಶ್ಲಾಘಿಸಿದ ಅವರು, ಕ್ರೀಡೆಯ ನಿಜವಾದ ಸೌಂದರ್ಯವು ಸ್ಪರ್ಧಿಸುವ ಧೈರ್ಯ, ಅತ್ಯುತ್ತಮ ಪ್ರದರ್ಶನ ನೀಡುವ ದೃಢನಿಶ್ಚಯ, ಫಲಿತಾಂಶವನ್ನು ಸ್ವೀಕರಿಸುವ ಕ್ರೀಡಾಸೂಕ್ತಿ ಮತ್ತು ನಿರಂತರವಾಗಿ ಕಲಿಯುವ ಉತ್ಸಾಹದಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಈ ಕ್ರೀಡಾಕೂಟದಲ್ಲಿ ಸೈನಿಕ ಶಾಲೆ ಕೊಡಗಿನ ಕೆಡೆಟ್ ಹೇಮಂತ್ ರೆಡ್ಡಿ ಜೂನಿಯರ್ ಬಾಸ್ಕೆಟ್ಬಾಲ್ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದರು. ದಿ ವಿಕಾಸ ಶಾಲೆಯ ಕೆಡೆಟ್ ಕನಿಷ್ಕಾ ಪಟೇಲ್ ಬಾಲಕಿಯರ ಬಾಸ್ಕೆಟ್ಬಾಲ್ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು.
ಸೈನಿಕ ಶಾಲೆ ಅಮರಾವತಿ ನಗರದ ಕೆಡೆಟ್ ಹರೀಶ್ ಜಿ ಬಾಲಕರ ವಾಲಿಬಾಲ್ ವಿಭಾಗದಲ್ಲಿ, ಕೆಡೆಟ್ ಕವಿಯಾ ಸೆಲ್ವನ್ ಕಿರಿಯ ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ, ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ನ ಕೆಡೆಟ್ ಚಿತ್ರಶ್ರೀ ಕಿರಿಯ ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದಲ್ಲಿ, ಸೈನಿಕ ಶಾಲೆ ಅಮರಾವತಿ ನಗರದ ಕೆಡೆಟ್ ಸುದೀಪ್ ಉಪಕಿರಿಯ ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ ಹಾಗೂ ವೇದವ್ಯಾಸ ಶಾಲೆಯ ಕೆಡೆಟ್ ಆರುಷಿ ಉಪಕಿರಿಯ ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗಳನ್ನು ಪಡೆದರು.
ಚರ್ಚಾ ಸ್ಪರ್ಧೆಯಲ್ಲಿ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ನ ಕೆಡೆಟ್ ಉತ್ಸವ್ ಬಿ ವಿಷಯದ ಪರವಾಗಿ ಅತ್ಯುತ್ತಮ ಮಾತುಗಾರ ಪ್ರಶಸ್ತಿಯನ್ನು ಪಡೆದರೆ, ಸೈನಿಕ ಶಾಲೆ ಕೊಡಗಿನ ಕೆಡೆಟ್ ಗಗನ್ ದೀಪ್ ವಿಷಯದ ವಿರುದ್ಧವಾಗಿ ಅತ್ಯುತ್ತಮ ಮಾತುಗಾರ ಪ್ರಶಸ್ತಿಯನ್ನು ಪಡೆದುಕೊಂಡರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಒಟ್ಟು ೧೧ ಶಾಲೆಗಳ ಪೈಕಿ ಆತಿಥೇಯ ಸೈನಿಕ ಶಾಲೆ ಕೊಡಗು ಪ್ರಥಮ ಸ್ಥಾನ ಪಡೆದು ಒಟ್ಟಾರೆ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಸೈನಿಕ ಶಾಲೆ ಅಮರಾವತಿ ನಗರ ದ್ವಿತೀಯ ಸ್ಥಾನ ಹಾಗೂ ವೇದವ್ಯಾಸ ವಿದ್ಯಾಲಯಂ ತೃತೀಯ ಸ್ಥಾನ ಗಳಿಸಿದವು.
ವರದಿ: ಪ್ರಿತುನ್ ಪೂವಣ್ಣ
