ಅಜ್ಜಮೂಲೆ ಕೆ ರಾಮಚಂದ್ರ ದೀಕ್ಷಿತರ ಸಂಸ್ಮರಣೆ ಮತ್ತು ಕೃತಿ ಬಿಡುಗಡೆ

0
17

ಚೊಕ್ಕಾಡಿ : ಚೊಕ್ಕಾಡಿ ಶ್ರೀ ರಾಮ ಸೇವಾ ಸಮಿತಿ ಮತ್ತು ದೇರಾಜೆ ಸಂಸ್ಕೃತಿರಂಗದ ಆಶ್ರಯದಲ್ಲಿ ದಿನಾಂಕ 27 – 09 – 2026ರಂದು ದೇಸೀ ಭವನದಲ್ಲಿ, ಪಾಕಶಾಸ್ತ್ರಜ್ಞ ಅಜ್ಜಮೂಲೆ ಕೆ ರಾಮಚಂದ್ರ ದೀಕ್ಷಿತರ ಸಂಸ್ಮರಣೆ ಮತ್ತು “ದೀಕ್ಷಿತ” ಕೃತಿ ಬಿಡುಗಡೆ ಸಮಾರಂಭವು, ಹಿರಿಯರಾದ ಆನೇಕಾರ ಗಣಪಯ್ಯನವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಸ್ಮರಣೆ ಮತ್ತು ಕೃತಿ ಪರಿಚಯವನ್ನು ಮಾಡಿದ ಹಿರಿಯ ಸಾಹಿತಿಗಳಾದ ಲಕ್ಷ್ಮೀಶ ಚೊಕ್ಕಾಡಿಯವರು ಮಾತನಾಡುತ್ತಾ , ಸತ್ತ ಮೇಲೆಯೂ ಓರ್ವರನ್ನು ಸ್ಮರಿಸುತ್ತೇವೆ ಎಂದರೆ ಅವರ ದೊಡ್ಡತನ ಏನು ಎಂಬುದು ತಿಳಿದುಬರುತ್ತದೆ. ಅಂತಹ ದೊಡ್ಡವರ ಸಾಲಿನಲ್ಲಿ, ಅಡುಗೆ ಕ್ಷೇತ್ರದ ವ್ಯಕ್ತಿಯೋರ್ವರನ್ನು ಸ್ಮರಿಸುತ್ತಿರುವುದು ಅಡುಗೆ ಲೋಕಕ್ಕೆ ಸಲ್ಲಿಸಿದ ಗೌರವ. ಈ ಹಿನ್ನೆಲೆಯಲ್ಲಿ ನೋಡಿದರೆ, ಮರಣೋತ್ತರ ಪ್ರಶಸ್ತಿಗಿಂತಲೂ ದೊಡ್ಡ ಗೌರವ, ಚೊಕ್ಕಾಡಿಯಲ್ಲಿ ಸೇರಿದ ಅವರ ಅಭಿಮಾನಿಗಳು, ಶಿಷ್ಯರೆಲ್ಲರೂ ಸೇರಿ ನಡೆಸುತ್ತಿರುವ ಸಂಸ್ಮರಣೆ ಮತ್ತು ಸಂಸ್ಮರಣ ಗ್ರಂಥ ಸಮರ್ಪಣೆ ಅಜ್ಜಮೂಲೆಯವರಿಗೆ ಸಂದಿದೆ.

ಮನುಷ್ಯನ ಜೀವಿತದಲ್ಲಿ ನೆಲೆ ಮತ್ತು ವಲಸೆ ಎರಡು ಪ್ರಧಾನ ಅಂಶಗಳಾಗಿವೆ. ಈ ಎರಡೂ ನೆಲೆಯಲ್ಲಿ, ಅಜ್ಜಮೂಲೆ ದೀಕ್ಷಿತರ ಪ್ರಭಾವ ಬಹಳ ದೊಡ್ದದು ಮತ್ತು ಸೃಷ್ಟಿಸಿದ ಪ್ರಭಾವಲಯ ಬಹು ವಿಸ್ತಾರವೂ ಆಗಿದೆ. ದೀಕ್ಷಿತರು ಅಡುಗೆಯ ಮೂಲಕ ಸ್ಥಾಪಿಸಿದ ಮತ್ತು ಬಿಟ್ಟುಹೋದ ಜೀವನ ಮೌಲ್ಯ ಹಾಗೂ ವೃತ್ತಿ ಗೌರವ ಸಾರ್ವಕಾಲಿಕ ಸತ್ಯವಾಗಿದೆ ಮಾತ್ರವಲ್ಲ ಅವರು ಅಡುಗೆಯವರಿಗೆ ಸಾಮಾಜಿಕವಾಗಿ ವಿಶೇಷ ಸ್ಥಾನಮಾನ ತಂದುಕೊಟ್ಟ ಬಹುಮಾನ್ಯರು ಎಂದು ಅಭಿಪ್ರಾಯಪಟ್ಟರು.

ಸಾಯಿಪ್ರಸಾದ ಅಜ್ಜನಗದ್ದೆಯವರು ಕೃತಿ ಬಿಡುಗಡೆ ಮಾಡಿ, ಈ ಕೃತಿ ನಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನದ ಸಂಕೇತ ಎಂದು ಶುಭಹಾರೈಸಿದರು. ಮುಖ್ಯ ಅಭ್ಯಾಗತರಾಗಿ ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್ ಎನ್ ಮನ್ಮಥ ಮತ್ತು ಕಳಂಜ ಎನ್ ವಿಶ್ವನಾಥ ರೈಯವರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಶ್ರೀ ರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಮಹೇಶ್ ಭಟ್ ಚೂಂತಾರು, ದೀಕ್ಷಿತರ ಮಗ ವೆಂಕಪ್ಪಯ್ಯ ಅಜ್ಜಮೂಲೆಯವರು ಉಪಸ್ಥಿತರಿದ್ದರು. ಕೃತಿಯ ಸಂಪಾದಕ ಸಮಿತಿಯ ಸದಸ್ಯರಾದ ಮಾಧವ ಭಟ್ ಶೃಂಗೇರಿ ಸ್ವಾಗತಿಸಿ, ಪ್ರಧಾನ ಸಂಪಾದಕರಾದ ರಾಮಕೃಷ್ಣ ಭಟ್ ಚೂಂತಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿಯ ಸದಸ್ಯರಾದ ಸುದೇಷ್ಣ ದೇರಾಜೆ ವಂದಿಸಿದರು, ನವೀನಕೃಷ್ಣ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ದೀಕ್ಷಿತರ ಭಾವಚಿತ್ರಕ್ಕೆ ಅತಿಥಿಗಳಿಂದ ಪುಷ್ಪಾರ್ಚನೆ ನಡೆಯಿತು. ಸಂಪಾದಕ ಸಮಿತಿಯ ಡಾ. ಬಾಲಸುಬ್ರಹ್ಮಣ್ಯ ಪಾಲೆಪ್ಪಾಡಿ, ಸುಬ್ರಹ್ಮಣ್ಯ ಮುಂಡುಗಾರು, ಎನ್ ಬಿ. ವೆಂಕಟ್ರಮಣ ನೇಣಾರು, ರಾಮ ಜೋಯಿಸ್ ಬೆಳ್ಳಾರೆ, ಸತ್ಯವೆಂಕಟೇಶ್ವರ ಹೆಬ್ಬಾರ್ ಶೇಣಿ, ನವೀನ ಅರಳಿಕಟ್ಟೆ ಇವರು ಅತಿಥಿಗಳನ್ನು ಗೌರವಿಸಿದರು. ಸಭೆಯ ನಂತರ ಊರ್ವಶಿ ಶಾಪ ಯಕ್ಷಗಾನ ತಾಳಮದ್ದಳೆ ಜರಗಿತು.

ವಿಶೇಷವಾಗಿ ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸೇವಾ ಸಹಕಾರಿ ಸಂಘ, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ನಾಟಿಕೇರಿ ಸೇವಾ ಟ್ರಸ್ಟ್ ಇವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು. ಈ ಸಂದರ್ಭದಲ್ಲಿ ಅಜ್ಜಮೂಲೆಯವರ ಸಂಸ್ಮರಣ ಗ್ರಂಥ “ದೀಕ್ಷಿತ” ಪುಸ್ತಕವನ್ನು ಎಲ್ಲರಿಗೂ ಉಚಿತವಾಗಿ ವಿತರಣೆ ಮಾಡಲಾಯಿತು.