ಏಕಾಗ್ರತೆ ಎಂಬುದು ಯಶಸ್ಸಿನ ಮೊದಲ ಮೆಟ್ಟಿಲು: ಸ್ವಾಮಿ ವೀರೇಶಾನಂದಜಿ

0
148


ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲವತ್ನಾಲ್ಕನೇ ಉಪನ್ಯಾಸ

“ನನ್ನ ಭರವಸೆಯಿರುವುದು ಯುವಜನತೆಯಲ್ಲಿ”್ಲ ಎಂದು ಘೋಷಿಸಿದ ಸ್ವಾಮಿ ವಿವೇಕಾನಂದರು, ಈ ದೇಶದ ಬದಲಾವಣೆಗೆ ನಾಂದಿಯಾಗೋ ಶಕ್ತಿ ಯುವಕರಲ್ಲಿದೆ ಎಂಬ ಖಚಿತ ನಂಬಿಕೆ ಹೊಂದಿದ್ದರು. ಅವರ ದೃಷ್ಟಿಯಲ್ಲಿ, ಯುವಕರು ಕೇವಲ ವಯಸ್ಸಿನಲ್ಲಿ ತಾಜಾಗಿರಬೇಕು ಎಂಬುದಲ್ಲ, ಅವರ ಮನಸ್ಸು, ನಡವಳಿಕೆ, ಹಾಗೂ ದೃಷ್ಟಿಕೋಣ ಕೂಡ ತಾಜಾತನದಿಂದ ಕೂಡಿರಬೇಕು. ಇಂದಿನ ಯುವಕರು ಗುರಿ ಗೊತ್ತಿರಿಸಿಕೊಂಡು, ಅದಕ್ಕೆ ಮೀಸಲಾಗಿರುವ ಏಕಾಗ್ರತೆಯನ್ನು ತಮ್ಮೊಳಗೆ ಬೆಳೆಸಿದಾಗ, ಅವರು ಬಯಸಿದ ಯಾವುದನ್ನೂ ಸಾಧಿಸಬಹುದು. ಏಕೆಂದರೆ ಜಗತ್ತಿನಲ್ಲಿ ಶ್ರೇಷ್ಠವಾದ ಕೆಲಸಗಳು ಆಗಿದ್ದು ಏಕಾಗ್ರ ಮನಸ್ಸಿನಿಂದಲೇ. ಅದೇ ವೇಳೆಗೆ, ತಮ್ಮ ಶಕ್ತಿಯ ಮೇಲೆ ನಂಬಿಕೆಯಿರಲಿ. ಆತ್ಮವಿಶ್ವಾಸವೆಂಬ ಆಂತರಿಕ ಶಕ್ತಿ ಅವರೊಳಗೆ ಮೊಳಕೆಯೊಡೆಯಲಿ. ಇಡೀ ಜಗತ್ತೇ ವಿರೋಧವಾಗಿದ್ದರೂ, ನಾನು ನನಗೆ ನಂಬಿಕೆ ಇಟ್ಟರೆ ಸಾಕು ಎಂಬ ಭಾವನೆ ಬೆಳೆಯಬೇಕು. ಇಂತಹ ಮನೋಭಾವವೇ ಯುವಕರನ್ನು ಮುಂದೂಡುವ ಎಂಜಿನ್ ಆಗುತ್ತದೆ.
ಆದರೆ ಇದು ಸಾಕಾಗದು. ಈ ದೇಶದ ಭವಿಷ್ಯವನ್ನು ಕಟ್ಟುವವರು ಬಲಿಷ್ಠ ಚಾರಿತ್ರ‍್ಯದ ಮಾದರಿಯಾಗಬೇಕು. ಯಾವಾಗಲೂ ಸತ್ಯದ ಹಾದಿಯಲ್ಲಿ ನಡೆಯುವ, ನೈತಿಕ ಮೌಲ್ಯಗಳಿಂದ ಕೂಡಿರುವ ವ್ಯಕ್ತಿತ್ವವೇ ನಿಜವಾದ ನಾಯಕತ್ವಕ್ಕೆ ಪೂರಕ. ಈ ಮೂರನ್ನು ಜೀವನದಲ್ಲಿ ಅಳವಡಿಸಿಕೊಂಡು, ಸ್ವಾಮಿ ವಿವೇಕಾನಂದರ ಕನಸುಗಳನ್ನು ನಿಜಪಡಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮೀಜಿಯಾಗಿರುವ ಸ್ವಾಮಿ ವೀರೇಶಾನಂದಜಿಯವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲವತ್ನಾಲ್ಕನೇ ಉಪನ್ಯಾಸದಲ್ಲಿ “ನನ್ನ ಭರವಸೆಯಿರುವುದು ಯುವಜನತೆಯಲ್ಲಿ”- ಸ್ವಾಮಿ ವಿವೇಕಾನಂದ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಮೂಡಬಿದ್ರೆಯ ಶ್ರೀ ಧವಲಾ ಕಾಲೇಜಿನಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ಧವಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪಾರ್ಶ್ವನಾಥ ಅಜ್ರಿ, ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್ ಹಾಗೂ ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಶ್ರೀ ಧವಲಾ ಕಾಲೇಜಿನ ಮಾನವ ಹಕ್ಕುಗಳ ಸಂಘದ ಸಂಯೋಜಕರಾದ ಸಂತೋಷ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿಯಾದ ಸಮೃದ್ಧಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here