ಮೂಡುಮಾರ್ನಾಡು ಪಿ.ಎಂ.ಶ್ರೀ. ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 2026 ರ ಸಾಲಿನಲ್ಲಿ 100% ಫಲಿತಾಂಶ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಫಲಿತಾಂಶ ಸಾಧನೆಗಾಗಿ ಶಾಲೆಯ ಶಿಕ್ಷಕವೃಂದದವರನ್ನು ಶಾಲಾ ಎಸ್ ಡಿ ಎಂ ಸಿ ವತಿಯಿಂದ ಅಭಿನಂದಿಸುವ ಕಾರ್ಯಕ್ರಮ ನಡೆಯಿತು.

ಕಳೆದ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪ್ರೀತಿಕಾ, ಶಾನ್ವಿ, ಮಾನ್ಯ ಹಾಗೂ ನಿಶಾತ್ ಫಾತಿಮಾ ಇವರನ್ನು ಹಾಗೂ ಕಳೆದ ಮೂರು ವರ್ಷಗಳಲ್ಲಿ ಸತತವಾಗಿ 100% ಫಲಿತಾಂಶ ಪಡೆದ ತಾಲೂಕಿನ ಏಕೈಕ ಸರಕಾರಿ ಪ್ರೌಢಶಾಲೆ ಎಂಬ ಕೀರ್ತಿಗೆ ಕಾರಣರಾದ ಶಾಲಾ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ ಎಸ್ ಕೋಟ್ಯಾನ್ , ಶಾಲೆಯು ಸ್ಥಾಪನೆಯಾದ ದಿನದಿಂದ ಈವರೆಗೂ ಉತ್ತಮ ಸಾಧನೆ ಮಾಡುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು. ಮೂಡುಬಿದಿರೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್. ಎಸ್. ವಿರೂಪಾಕ್ಷಪ್ಪ ಅವರು ತಾಲ್ಲೂಕಿನ ಸರಕಾರಿ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದುದಕ್ಕಾಗಿ ಇದುವರೆಗೆ ಈ ಶಾಲೆಯ ಒಟ್ಟು ಹತ್ತು ಮಕ್ಕಳು ಕಂಪ್ಯೂಟರ್ ಗಳನ್ನು ಸರ್ಕಾರದಿಂದ ಬಹುಮಾನವಾಗಿ ಪಡೆದಿರುವುದು ಅತೀ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ಅತೀ ಹೆಚ್ಚಿನ ಫಲಿತಾಂಶ ಸಾಧಿಸಿದ ಮೂಡುಬಿದಿರೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಎಚ್.ಎಸ್.ವಿರೂಪಾಕ್ಷಪ್ಪ ರವರನ್ನು ಶಾಲೆಯ ಪರವಾಗಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲೆಯ ನಿಕಟಪೂರ್ವ ಮುಖ್ಯ ಶಿಕ್ಷಕರಾಗಿದ್ದು, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಡಾ|| ರಾಜಶ್ರೀ ಬಿ. ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಪಡುಮಾರ್ನಾಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಯಶೋಧರ ಆಚಾರ್ಯ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೋಭಾ, ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಪೋಷಕರು ಹಾಜರಿದ್ದರು.
ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಸ್ವಾಗತಿಸಿದರು. ಹಿಂದಿ ಭಾಷಾ ಶಿಕ್ಷಕಿ ಬಾಬಿ ಧನ್ಯವಾದ ಸಲ್ಲಿಸಿದರು. ಸಮಾಜ ಶಿಕ್ಷಕ ಜೋನ್ ರೊನಾಲ್ಡ್ ಕಾರ್ಯಕ್ರಮ ನಿರೂಪಿಸಿದರು.

