
ಕಿನ್ನಿಗೋಳಿ : ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಆಶ್ರಯದಲ್ಲಿ ಮುಲ್ಕಿ ಮತ್ತು ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಹಕಾರದಿಂದ ಅಯೋಧ್ಯೆ ಶ್ರೀರಾಮ ಮಂದಿರದ ಹುಂಡಿ ಕಳವು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ಕಿನ್ನಿಗೋಳಿಯಲ್ಲಿ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ ರಾಮನ ಹೆಸರಿನಲ್ಲಿ ರಾಜಕಾರಣ ಮಾಡಿ ಧಾರ್ಮಿಕ ಭಾವನೆಗಳಿಗೆ ದ್ರೋಹ ಮಾಡಿದ್ದ ಬಿಜೆಪಿ ಪಕ್ಷಕ್ಕೆ ಧಿಕ್ಕಾರವಿರಲಿ. ಅಯೋಧ್ಯೆಯಲ್ಲಿ ನಡೆದ ಹುಂಡಿ ಕಳ್ಳತನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದು ಉತ್ತರ ನೀಡಬೇಕಾಗಿದೆ. ರಾಜಕೀಯದಲ್ಲಿ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. 13 ಕೋಟಿ ರಾಮಜಪ ಮಾಡಿದ ಮಹಾತ್ಮ ಗಾಂಧಿಯನ್ನು ಅವಹೇಳನ ಮಾಡಿದ ಬಿಜೆಪಿಗರು ಅಯೋಧ್ಯೆ ಹುಂಡಿ ಕಳ್ಳತನದ ಬಗ್ಗೆ ಮೌನವಾಗಿದ್ದಾರೆ. ಇದರ ಬಗ್ಗೆ ಕೂಲಂಕುಶ ತನಿಖೆ ನಡೆಯಬೇಕು . ಮುಂದಿನ ದಿನಗಳಲ್ಲಿ ಆಯೋಧ್ಯೆ ಹುಂಡಿ ಕಳ್ಳತನದ ಬಗ್ಗೆ ಮತ್ತಷ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ ಅಯೋಧ್ಯೆ ಹುಂಡಿ ಕಳ್ಳತನದಲ್ಲಿ ಕೋಟ್ಯಾಂತರ ರೂಪಾಯಿ ನುಂಗಪ್ಪವಾಗಿದೆ ರಾಮಭಕ್ತರು ಭಕ್ತಿಯಿಂದ ಹಾಕಿದ ದೇಣಿಗೆ ನಾಪತ್ತೆಯಾಗಿದೆ ಇದು ರಾಮಭಕ್ತರ ಭಕ್ತಿ ಹಾಗೂ ಶ್ರದ್ದೆಗೆ ಮಾಡಿದ ಅಪಮಾನ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ ಅಯೋಧ್ಯೆ ಹುಂಡಿ ಕಳ್ಳತನ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ, ಚುನಾವಣೆ ಬರುವಾಗ ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ಈಗ ಎಲ್ಲಿದೆ. ಭಾರತದ ಜನಪ್ರಿಯ ಪ್ರಧಾನಿ ಮೋದಿ ಅವರು ನಾ ಕಾವುಂಗಾ ಎಂದು ಹೇಳಿ ಪಕ್ಷದವರೇ ಕೋಟಿ ಕೋಟಿ ಹಣ ಲೂಟಿ ಮಾಡಿದರೂ ಮೌನವಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿಭಟನೆಯಲ್ಲಿ ಮಾಜೀ ಸಚಿವರಾದ ಕೆ ಅಭಯಚಂದ್ರ ಜೈನ್,
ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೊರಿಯಾರ್,ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಮೂಡಬಿದ್ರೆ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಕುಮಾರ್ ಪೂಜಾರಿ ಇರುವೈಲು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ್ ದೇವಾಡಿಗ ಪಂಜ,ದ ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಡೆನ್ನಿಸ್ ಡಿಸಿಲ್ವ,ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ, ಪುತ್ತುಬಾವ, ಚಂದ್ರಹಾಸ ಸನಿಲ್ ಮೂಡಬಿದ್ರೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಕಿನ್ನಿಗೋಳಿ ರಾಜಾಂಗಣದಿಂದ ಬಸ್ ನಿಲ್ದಾಣದವರೆಗೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಸಾವಿರಾರು ಮಂದಿ ಕಾರ್ಯಕರ್ತರು ಬಿರುಸಿನ ಮಳೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

