ಕೊಡವೂರು : ಗೆಳೆಯರ ಬಳಗ (ರಿ.) ಗರ್ಡೇ ಲಕ್ಷ್ಮೀನಗರ ಹಾಗೂ ಅಂಗನವಾಡಿ ಕೇಂದ್ರ ಗರ್ಡೇ ಲಕ್ಷ್ಮೀನಗರ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಾಗೂ ಗೆಳೆಯರ ಬಳಗದ ವತಿಯಿಂದ ಅಂಗನವಾಡಿಗೆ ಕೊಡುಗೆಯಾಗಿ ನೀಡಲಾದ ತಗಡು ಚಪ್ಪರದ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು.
ನೂತನ ತಗಡು ಚಪ್ಪರವನ್ನು ಉದ್ಘಾಟಿಸಿ ಮಾತನಾಡಿದ ಕೆ. ವಿಜಯ ಕೊಡವೂರು ಅವರು, “ಮಕ್ಕಳಿಗೆ ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಸಿಗಲಿ ಮತ್ತು ಅನುಕೂಲವಾಗಲಿ ಎಂಬ ಉದ್ದೇಶದಿಂದ ಗೆಳೆಯರ ಬಳಗದವರು ತಮ್ಮ ಸ್ವಂತ ವೆಚ್ಚದಲ್ಲಿ ಈ ಚಪ್ಪರವನ್ನು ನಿರ್ಮಿಸಿಕೊಟ್ಟಿರುವುದು ಅತ್ಯಂತ ಶ್ಲಾಘನೀಯ. ಸಂಸ್ಥೆಯು ಈಗಾಗಲೇ ಹತ್ತು ಹಲವು ಉತ್ತಮ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲೂ ಇವರಿಂದ ಇಂತಹ ಉತ್ತಮ ಕಾರ್ಯಗಳು ಸಾಗಲಿ” ಎಂದು ಶುಭಹಾರೈಸಿದರು.
ಗೆಳೆಯರ ಬಳಗದ ಅಧ್ಯಕ್ಷರಾದ ಅಶೋಕ್ ಪೂಜಾರಿ, ಹಿರಿಯರಾದ ಕೃಷ್ಣ ಪೂಜಾರಿ, ಮಾತೃಶ್ರೀ ಮಹಿಳಾ ಮಂಡಳಿ ಅಧ್ಯಕ್ಷರಾದ ಪ್ರೇಮ, ನಮ್ಮ ಕ್ಲಿನಿಕ್‌ನ ವೈದ್ಯರಾದ ಡಾ. ತನ್ವಿ ಪೂಜಾರಿ, ಪ್ರಮುಖರಾದ ಸುಧಾನ್ವ ಶೆಟ್ಟಿಗಾರ್, ಪ್ರಶಾಂತ್ ಶೆಟ್ಟಿಗಾರ್, ಗೌರವ್, ಚೇತನ್ ಶೆಟ್ಟಿಗಾರ್ ಹಾಗೂ ಕಮಲಾಕ್ಷ ಕೋಟ್ಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಅವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

