ಮಾದಕ ವಸ್ತು ಸಾಗಾಟಕ್ಕೆ ಬ್ರೇಕ್ : ಬಂಟ್ವಾಳದಲ್ಲಿ ಮೂವರ ಬಂಧನ

0
29

ಬಂಟ್ವಾಳ : ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಹೊಂದಿದ್ದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮೂವರನ್ನು ಬಂಧಿಸಿ, ಸುಮಾರು 4.90 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ಅಡ್ಯಾರ್‌ನ ನಾಸಿರ್ ಹುಸೇನ್ (37), ಕಂಕನಾಡಿಯ ಅಫ್ರಿದಿ (24) ಹಾಗೂ ಬಂಟ್ವಾಳ ಗೋಳ್ತಮಜಲುವಿನ ಜುನೈದ್ (38) ಬಂಧಿತ ಆರೋಪಿಗಳು.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಎಂಬಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ 22.57 ಗ್ರಾಂ ಎಂಡಿಎಂಎ, 30.34 ಗ್ರಾಂ ಗಾಂಜಾ, ಮಾದಕ ವಸ್ತುಗಳ ಸಾಗಾಟಕ್ಕೆ ಬಳಸಲಾಗಿದ್ದ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 4.90 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮಾದಕ ವಸ್ತುಗಳನ್ನು ಹೊಂದಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುಗಳ ಮೂಲ ಹಾಗೂ ಸಾಗಾಟದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ., ಪಿಎಸ್‌ಐ ರನ್ನಗೌಡ ಎಸ್. ಪಾಟೀಲ್, ಪ್ರೊಬೇಷನರಿ ಪಿಎಸ್‌ಐಗಳಾದ ಶಿವರಾಮ ಹಾಗೂ ಫಕೀರಪ್ಪ ಮತ್ತು ಪೊಲೀಸ್ ಸಿಬ್ಬಂದಿಗಳಾದ ಉದಯ ರೈ, ರಾಧಾಕೃಷ್ಣ ಕೆ., ಪ್ರವೀಣ್ ರೈ, ಪ್ರಶಾಂತ್, ಲೋಕೇಶ್, ವಿವೇಕ ರೈ, ಕುಮಾರ್, ಬಸವರಾಜ್, ಶ್ರೀಧರ್ ಹಾಗೂ ಧನ್ಯಶ್ರೀ ಭಾಗವಹಿಸಿದ್ದರು.

ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಹಾಗೂ ಸಂಪತ್ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.